ಅಹಮದಾಬಾದ್(ಗುಜರಾತ್):ಕುಸಿದು ಬಿದ್ದು 141 ಜನರ ಬಲಿ ಪಡೆದ ಶತಮಾನಗಳಷ್ಟು ಹಳೆಯದಾದ ಗುಜರಾತ್ನ ಮೊರ್ಬಿ ಸೇತುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಜೊತೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕೂಡ ಇದ್ದರು. ಮಚ್ಚು ನದಿಯಲ್ಲಿ ಕಣ್ಮರೆಯಾಗಿರುವ ಜನರ ಪತ್ತೆ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೆ ಮೋರ್ಬಿಯ ಸಿವಿಲ್ ಆಸ್ಪತ್ರೆಗೂ ಭೇಟಿ ನೀಡಿದರು. ಈ ವೇಳೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೋರ್ಬಿಯಲ್ಲಿ ಕೇಬಲ್ ಸೇತುವೆ ಕುಸಿತದ ದುರ್ಘಟನೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್ಡಿಆರ್ಎಫ್ ಸಿಬ್ಬಂದಿ ಜತೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸಿದರು.
2 ದಿನಗಳ ಹಿಂದೆ ಮೊರ್ಬಿ ಪಟ್ಟಣದ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಕೇಬಲ್ ತೂಗು ಸೇತುವೆಯನ್ನು ನವೀಕರಿಸಿ ಜನರ ಓಡಾಟಕ್ಕೆ ಮುಕ್ತಗೊಳಿಸಲಾಗಿತ್ತು. ಭಾನುವಾರದಂದು ರಜೆ ದಿನವಾದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇತುವೆಗೆ ಭೇಟಿ ನೀಡಿದ್ದರು. ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಜನರು ಸೇತುವೆ ನಿಂತಿದ್ದ ಕಾರಣ ಅದು ಕುಸಿದು ಬಿದ್ದು ಈವರೆಗೂ 141 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಕ್ಷಣೆಗೆ ಸೂಚಿಸಿದ್ದ ಪ್ರಧಾನಿ:ಇನ್ನು 2 ದಿನಗಳಿಂದ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಾರ್ವಜನಿಕ ಸಮಾರಂಭದಲ್ಲಿ ಘಟನೆ ನೆನೆದು ಭಾವುಕರಾಗಿದ್ದರು. ಗಾಂಧಿನಗರದ ರಾಜಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಕ್ಷಿಪ್ರ ರಕ್ಷಣಾ ಕಾರ್ಯ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದರು.