ಒಡಿಶಾ: ತ್ರಿವಳಿ ರೈಲು ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ಬಾಲಸೋರ್ (ಒಡಿಶಾ): 261 ಜನ ಪ್ರಯಾಣಿಕರ ಸಾವಿಗೆ ಕಾರಣವಾದ ಒಡಿಶಾದ ಬಾಲಸೋರ್ ಜಿಲ್ಲೆಯ ರೈಲು ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಮಧ್ಯಾಹ್ನ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ಬಾಲಸೋರ್ಗೆ ಬಂದಿಳಿದ ಪ್ರಧಾನಿ ನಂತರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಪ್ರಧಾನಿ ಮೋದಿ ಅವರಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು. ಘಟನಾ ಸ್ಥಳದಲ್ಲಿ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಜೊತೆಗೆ ಮಾತನಾಡಿ ಪ್ರಧಾನಿ ಮಾಹಿತಿ ಪಡೆದರು. ಇಂದು ಬೆಳಗ್ಗೆ ಪ್ರಧಾನಿ ಮೋದಿ ಪರಿಸ್ಥಿತಿಯನ್ನು ಅವಲೋಕಿಸಲು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಂತ್ರಸ್ತರ ರಕ್ಷಣೆ, ಪರಿಹಾರ ಮತ್ತು ವೈದ್ಯಕೀಯ ಆರೈಕೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಚರ್ಚಿಸಿದ್ದರು.
ಇದಕ್ಕೂ ಮುನ್ನ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಧರ್ಮೇಂದ್ರ ಪ್ರಧಾನ್ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಿದರು. ಅಲ್ಲದೇ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದುರಂತ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಇದನ್ನೂ ಓದಿ:ತ್ರಿವಳಿ ರೈಲು ದುರಂತ: ಆಸ್ಟ್ರೇಲಿಯಾ, ಶ್ರೀಲಂಕಾ, ಕೆನಡಾ ನಾಯಕರ ತೀವ್ರ ಸಂತಾಪ
ಈ ವೇಳೆ ಸ್ಥಳದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಮಮತಾ ಬ್ಯಾನರ್ಜಿ ಮಾತುಕತೆ ನಡೆಸಿದರು. ವೈಷ್ಣವ್ ಅವರೊಂದಿಗೆ ಸಂವಹನ ನಡೆಸುವಾಗ ಮಮತಾ ರೈಲ್ವೆ ಇಲಾಖೆಯಲ್ಲಿ ಸಮನ್ವಯದ ಕೊರತೆಯ ಬಗ್ಗೆ ದೂರಿದರು. ನಂತರ ಮಾತನಾಡಿದ ಅವರು, ಇದು ಕಳೆದ 15 ವರ್ಷಗಳಲ್ಲಿ ನಡೆದ ಅತ್ಯಂತ ಕೆಟ್ಟ ದುರಂತವಾಗಿದೆ. ನಾನು ಮೂರು ಅವಧಿಗೆ ರೈಲ್ವೆ ಸಚಿವೆ ಆಗಿದ್ದಾಗ ಆ್ಯಂಟಿ ಡಿಕ್ಕಿ ಸಿಸ್ಟಂ ಅಳವಡಿಸಲು ಮುಂದಾಗಿದ್ದೆ. ಈ ವ್ಯವಸ್ಥೆ ಕೆಲಸ ಮಾಡಿದ್ದರೆ ಅಪಘಾತವನ್ನು ತಪ್ಪಿಸಬಹುದಿತ್ತು ಎಂದು ಭಾವಿಸಿದ್ದೇನೆ. ದುರಂತದಲ್ಲಿ ಸಾವನ್ನಪ್ಪಿದ ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳದಿಂದ ಬಂದವರು ಎಂದು ಹೇಳಿದರು.
ಇಲ್ಲಿನ ಬಹನಾಗಾ ಬಜಾರ್ ನಿಲ್ದಾಣದ ಸಮೀಪ ಶುಕ್ರವಾರ ದೇಶ ಕಂಡ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾದ ತ್ರಿವಳಿ ರೈಲು ದುರಂತದ ಸಂಭವಿಸಿದೆ. ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಅಪಘಾತಕ್ಕೀಡಾಗಿವೆ. ಒಂದಕ್ಕೊಂದು ಡಿಕ್ಕಿ ಹೊಡೆದು ಮೂರು ರೈಲುಗಳು ಚೆಲ್ಲಾಪಿಲ್ಲಿಯಾಗಿ ಅಪಾರ ಪ್ರಮಾಣ ಸಾವು-ನೋವು ಉಂಟಾಗಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ಮೃತರ ಸಂಖ್ಯೆ 261ಕ್ಕೆ ಹೆಚ್ಚಳವಾಗಿದ್ದು, ಸುಮಾರು 900 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಭೀಕರ ತ್ರಿವಳಿ ರೈಲು ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣ: ಘಟನೆಯ ತನಿಖೆ ಆರಂಭ