ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಇದೇ ಸೆಪ್ಟೆಂಬರ್ 23 ರಿಂದ 25ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಜೋ ಬೈಡನ್ ಅವರು ಯುಎಸ್ ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ಯುಎಸ್ ಪ್ರವಾಸ ಇದಾಗಿದೆ.
ತಮ್ಮ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ. ಕ್ವಾಡ್ ಹಾಗೂ ಜಿ-7 ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸೆಪ್ಟೆಂಬರ್ 25 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಭಯೋತ್ಪಾದನೆ ನಿಗ್ರಹ ಹಾಗೂ ಕೋವಿಡ್ ನಿಯಂತ್ರಣ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.
ಇದೇ ಸಭೆಯಲ್ಲಿ ಅಫ್ಘಾನಿಸ್ತಾನದ ಬಗ್ಗೆ ಭಾರತದ ನಿಲುವನ್ನು ತಿಳಿಸುವ ನಿರೀಕ್ಷೆ ಇದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವ, ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ವಿಶ್ವಸಂಸ್ಥೆಯಲ್ಲಿನ ಸುಧಾರಣೆಗಳ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊರೊನಾ ವೈರಸ್ ಕಾಣಿಸಿದ ನಂತರ ಪ್ರಧಾನಿ ಮೋದಿಯವರ 2ನೇ ವಿದೇಶ ಪ್ರವಾಸ ಇದಾಗಿದೆ. 2019ರಲ್ಲಿ ಕಡೆಯ ಬಾರಿಗೆ ನಮೋ ಅಮೆರಿಕಕ್ಕೆ ಭೇಟಿ ನೀಡಿದ್ದರು. ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಯಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ 'ಹೌಡಿ ಮೋದಿ' ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
ಇದನ್ನೂ ಓದಿ:ಕೊರೊನಾ 3ನೇ ಅಲೆ ಭೀತಿ: ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ