ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ಈ ವರ್ಷ ಆ.13 ರಿಂದ 15ರವರೆಗೆ 'ಹರ್ ಘರ್ ತಿರಂಗಾ'(ಪ್ರತಿ ಮನೆಯಲ್ಲೂ ತ್ರಿವರ್ಣ) ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೇಶದ ಜನತೆಗೆ ಕರೆ ನೀಡಿದರು. 'ಹರ್ ಘರ್ ತಿರಂಗ' ವೆಬ್ ಸೈಟ್ನಲ್ಲಿ ತಿರಂಗದೊಂದಿಗೆ ನಿಮ್ಮ ಭಾವಚಿತ್ರಗಳನ್ನು ಅಪ್‌ಲೋಡ್ ಮಾಡಿ ಎಂದು ಪ್ರಧಾನಿ ಹೇಳಿದರು.
"ತಿರಂಗ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಏಕತೆಯ ಚೈತನ್ಯವನ್ನು ಸಂಕೇತಿಸುತ್ತದೆ. ಪ್ರತಿಯೊಬ್ಬ ಭಾರತೀಯನು ತ್ರಿವರ್ಣ ಧ್ವಜದೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾನೆ. ಮತ್ತು ಇದು ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಶ್ರಮಿಸಲು ನಮಗೆ ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
"ಆಗಸ್ಟ್ 13 ರಿಂದ 15 ರ ನಡುವೆ ಹರ್ ಘರ್ ತಿರಂಗಾ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ತಿರಂಗದೊಂದಿಗೆ ನಿಮ್ಮ ಫೋಟೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಿ. https://harghartiranga.com" ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ಧಾರೆ.
1,800 ವಿಶೇಷ ಅತಿಥಿಗಳು ಭಾಗಿ:ಆ. 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಭಾರತದಾದ್ಯಂತ ಸುಮಾರು 1,800 ವಿಶೇಷ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಭಾರತವು ಈ ವರ್ಷ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುತ್ತಿದೆ. ಹಳ್ಳಿಗಳ ಸರಪಂಚರು, ಶಿಕ್ಷಕರು, ದಾದಿಯರು, ರೈತರು, ಮೀನುಗಾರರು, ನವದೆಹಲಿಯಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ನಿರ್ಮಿಸಲು ಸಹಾಯ ಮಾಡಿದ ಶ್ರಮ ಯೋಗಿಗಳು, ಖಾದಿ ವಲಯದ ಕಾರ್ಮಿಕರು, ರಾಷ್ಟ್ರ ಪ್ರಶಸ್ತಿ ವಿಜೇತ ಶಾಲಾ ಶಿಕ್ಷಕರು, ಗಡಿ ರಸ್ತೆಗಳ ಸಂಘಟನೆ, ದೇಶದ ವಿವಿಧ ಭಾಗಗಳಲ್ಲಿ ಜಾರಿಗೊಳಿಸಲಾದ ಅಮೃತ್ ಸರೋವರ ಯೋಜನೆಗಳು ಮತ್ತು ಹರ್ ಘರ್ ಜಲ ಯೋಜನೆಗಳಿಗೆ ಸಹಾಯ ಮಾಡಿದ ಮತ್ತು ಕೆಲಸ ಮಾಡಿದ ಕಾರ್ಮಿಕರು ಈ ವರ್ಷ ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಮ್ಮ ಸಂಗಾತಿಯೊಂದಿಗೆ ಭಾಗವಹಿಸಲು ಆಹ್ವಾನಿಸಲಾಗಿದೆ" ಎಂದು ಕೇಂದ್ರ ಕೃಷಿ ಸಚಿವಾಲಯ ಮತ್ತು ರೈತರ ಕಲ್ಯಾಣ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾರಾಷ್ಟ್ರದಿಂದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ' (PM-KISAN)ಯ ಇಬ್ಬರು ಫಲಾನುಭವಿಗಳು ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಸಾಕ್ಷಿಯಾಗಲಿದ್ದಾರೆ. ಯೋಜನೆಯ 50 ಫಲಾನುಭವಿಗಳು ಅವರ ಕುಟುಂಬಗಳೊಂದಿಗೆ, ಪ್ರಧಾನಿ ಮೋದಿ ಅವರ ಭಾಷಣವನ್ನು ಕೇಳಲು ಆಹ್ವಾನಿಸಲಾದ ಸುಮಾರು 1,800 ವ್ಯಕ್ತಿಗಳಲ್ಲಿ ಇವರೂ ಕೂಡಾ ಸೇರಿದ್ದಾರೆ.
ಭಾರತದಾದ್ಯಂತ ಎಲ್ಲ ವರ್ಗಗಳ ಜನರನ್ನು ಆಹ್ವಾನಿಸಲು ಮತ್ತು ಆಚರಣೆಯ ಭಾಗವಾಗಿಸಲು ಉಪಕ್ರಮವನ್ನು ಸರ್ಕಾರ 'ಜನ್ ಭಾಗಿದರಿ'ಯ ದೃಷ್ಟಿಗೆ ಅನುಗುಣವಾಗಿ ನಿರ್ಧರಿಸಲಾಗಿದೆ" ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ, ದೆಹಲಿ ಪೊಲೀಸರು ರಾಷ್ಟ್ರೀಯ ರಾಜಧಾನಿಯಾದ್ಯಂತ ತಪಾಸಣೆ ಮತ್ತು ಹೆಚ್ಚಿನ ಭದ್ರತೆ ಕೈಗೊಂಡಿದ್ಧಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಹರ್ ಘರ್ ತಿರಂಗಾ ಅಭಿಯಾನ:ಹರ್ ಘರ್ ತಿರಂಗಾ ಅಭಿಯಾನ ಸ್ವಾತಂತ್ರ್ಯ ದಿನಾಚರಣೆಯ ಒಂದು ಭಾಗ. ಈ ಉಪಕ್ರಮ ದೇಶದ ನಾಗರಿಕರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರಧ್ವಜವನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸುತ್ತದೆ. 2022 ಜು.22 ರಂದು ಪ್ರಧಾನಿ ನರೇಂದ್ರ ಮೋದಿ ಈ ಅಭಿಯಾನವನ್ನು ಆರಂಭಿಸಿದರು. ಆ.13 ರಿಂದ 15 ರವರೆಗೆ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಮೋದಿ ದೇಶದ ಜನತೆಗೆ ಕರೆ ನೀಡಿದ್ದರು. ಅಲ್ಲದೇ ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ದೇಶದ ಜನರಿಗೆ ಸೂಚಿಸಿದ್ದರು.
ಇದನ್ನೂ ಓದಿ:'ಹರ್ ಘರ್ ತಿರಂಗಾ' ಆಂದೋಲನ ಬೆಂಬಲಿಸಿ: ರಾಷ್ಟ್ರದ ಜನತೆಗೆ ಪ್ರಧಾನಿ ಮೋದಿ ಕರೆ