ನವದೆಹಲಿ: 'ಹರ್ ಘರ್ ತಿರಂಗಾ' (ಪ್ರತಿ ಮನೆಯಲ್ಲೂ ತ್ರಿವರ್ಣ) ಆಂದೋಲನವನ್ನು ಬಲಪಡಿಸುವಂತೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನತೆಯನ್ನು ಒತ್ತಾಯಿಸಿದ್ದಾರೆ. ಆಗಸ್ಟ್ 13 ಮತ್ತು 15 ರ ನಡುವೆ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಅಥವಾ ಪ್ರದರ್ಶಿಸುವಂತೆ ಅವರು ಕರೆ ಕೊಟ್ಟಿದ್ದಾರೆ.
ಈ ಕುರಿತಂತೆ ಪ್ರಧಾನಿ ಸರಣಿ ಟ್ವೀಟ್ ಮಾಡಿದ್ದು, ಈ ವರ್ಷ ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆಯಲ್ಲಿ ನಾವು ಹರ್ ಘರ್ ತಿರಂಗಾ ಆಂದೋಲನವನ್ನು ಬಲಪಡಿಸೋಣ. ಈ ಆಂದೋಲನವು ರಾಷ್ಟ್ರಧ್ವಜದೊಂದಿಗೆ ನಮ್ಮ ಸಂಪರ್ಕವನ್ನು ಗಾಢಗೊಳಿಸುತ್ತದೆ ಎಂದು ಹೇಳಿದ್ದಾರೆ.
1947ರ ಈ ದಿನ(ಜು.22) ರಾಷ್ಟ್ರಧ್ವಜವನ್ನು ಅಂಗೀಕರಿಸಿದ್ದು ದೇಶದ ಇತಿಹಾಸದಲ್ಲಿ ವಿಶೇಷವಾದ ಸ್ಥಾನವಿದೆ. ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿರುವಾಗ ಸ್ವತಂತ್ರ ಭಾರತಕ್ಕಾಗಿ ಧ್ವಜದ ಕನಸು ಕಂಡವರೆಲ್ಲರ ಧೈರ್ಯ ಮತ್ತು ಪ್ರಯತ್ನಗಳನ್ನು ನಾವು ಇಂದು ನೆನಪಿಸಿಕೊಳ್ಳುತ್ತೇವೆ. ಅವರ ಕನಸಿನ ಭಾರತವನ್ನು ನಿರ್ಮಿಸಲು ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ತಿಳಿಸಿದ್ದಾರೆ.
ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳಲು ಕಾರಣವಾದ ಅಧಿಕೃತ ವಿವರಗಳನ್ನು ಮೋದಿ ಪೋಸ್ಟ್ ಮಾಡಿದ್ದಾರೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಹಾರಿಸಿದ ಮೊದಲ ತ್ರಿವರ್ಣ ಧ್ವಜದ ಚಿತ್ರವನ್ನು ಸಹ ಅವರು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು "ಭಾರತ ಮಾತೆಯ ನಿಜವಾದ ಮಕ್ಕಳು" ಎಂದು ಸಾಬೀತುಪಡಿಸಲು ಆ.13 ರಿಂದ 15 ರವರೆಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ರಾಜ್ಯದ ನಿವಾಸಿಗಳನ್ನು ಒತ್ತಾಯಿಸಿದ್ದರು. ಶರ್ಮಾ ಹೇಳಿಕೆಗೆ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದು ಜನರು ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲು ಕೇಳುವ ಅಗತ್ಯವಿಲ್ಲ ಎಂದು ಟೀಕೆ ಮಾಡಿದ್ದವು.
ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಕೈಗೊಳ್ಳಲಿರುವ 'ಹರ್ ಘರ್ ತಿರಂಗಾ' ಅಭಿಯಾನದ ಭಾಗವಾಗಿ ಮುಂದಿನ ತಿಂಗಳು ಮೂರು ದಿನಗಳ ಕಾಲ ದೇಶಾದ್ಯಂತ 20 ಕೋಟಿಗೂ ಹೆಚ್ಚು ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗುತ್ತದೆ. ಭಾರತ ಮಾತೆಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಅಭಿಯಾನದಲ್ಲಿ 100 ಕೋಟಿಗೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ, ಜನರಲ್ಲಿ ಹೊಸ ದೇಶಭಕ್ತಿಯ ಭಾವವನ್ನು ಬೆಳೆಸಲು ಇದು ಹೆಚ್ಚು ಕೊಡುಗೆ ನೀಡುತ್ತದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:'ಹರ್ ಘರ್ ತಿರಂಗಾ'ಅಭಿಯಾನ: ಸೂರತ್ನಲ್ಲಿ 10 ಕೋಟಿ ತ್ರಿವರ್ಣ ಧ್ವಜ ಸಿದ್ಧಪಡಿಸುವ ಗುರಿ