ನವದೆಹಲಿ:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಂದಿಗೆ (ಮೇ 30) 9 ವರ್ಷಗಳಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಜನರ ಸೇವೆಗಾಗಿ, ದೇಶದ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇವೆ. ನಮ್ಮ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಂದಿಗೆ ನಮ್ಮ ಸರ್ಕಾರಕ್ಕೆ ನವವಸಂತಗಳು ತುಂಬಿವೆ. ಈ ಹಂತದಲ್ಲಿ ನನ್ನ ಮನಸ್ಸು ನಮ್ರತೆ ಮತ್ತು ಕೃತಜ್ಞತೆಯಿಂದ ತುಂಬಿದೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ಕ್ರಿಯೆ ದೇಶದ ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದ ಕೂಡಿರುತ್ತದೆ. ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ನಾವು ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇವೆ ಎಂದು #9ವರ್ಷಗಳ ಸೇವೆ ಎಂದು ಹ್ಯಾಷ್ಟ್ಯಾಗ್ ಮೂಲಕ ಟ್ವೀಟಿಸಿದ್ದಾರೆ.
ಕೇಂದ್ರ ಸರ್ಕಾರ ಈವರೆಗೂ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ನಮ್ಮ ಪ್ರಯಾಣದ ನೋಟವನ್ನು ಜನರು ಪರೀಕ್ಷಿಸಬಹುದು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಜನರು ಹೇಗೆ ಪಡೆದಿದ್ದಾರೆ ಎಂಬುದನ್ನು ಇದು ಹೊಂದಿದೆ. ಇದನ್ನು ಪರಿಶೀಲಿಸುವ ಅವಕಾಶ ಇಲ್ಲಿದೆ ಎಂದು ಲಿಂಕ್ವೊಂದನ್ನು ಹಂಚಿಕೊಂಡಿದ್ದಾರೆ.
ಮೋದಿ ಸರ್ಕಾರದ ಪ್ರಮುಖ ಸಾಧನೆಗಳು:ಸ್ವಚ್ಛ ಭಾರತ್ ಅಭಿಯಾನ, ಆಯುಷ್ಮಾನ ಆರೋಗ್ಯ ಯೋಜನೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶ್ಮೀರಕ್ಕಿದ್ದ 370 ನೇ ವಿಧಿ ರದ್ದು ಮಾಡಿ ಭಯೋತ್ಪಾದನೆ ನಿಗ್ರಹ, ಪೌರತ್ವ ತಿದ್ದುಪಡಿ ಕಾಯ್ದೆ, ಆತ್ಮನಿರ್ಭರ್ ಭಾರತ, ತ್ರಿವಳಿ ತಲಾಖ್ ರದ್ದತಿ, ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ತ್ವರಿತಗತಿ, ದೇಶದ ವಿವಿಧೆಡೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಯೋಜನೆ ಜಾರಿ ಸೇರಿದಂತೆ ಹತ್ತು ಹಲವಾರು ಪ್ರಮುಖ ಯೋಜನೆಗಳನ್ನು ಜಾರಿ ಮಾಡಿದೆ.