ಡೆಹ್ರಾಡೂನ್ :ಮುಂದಿನ ವರ್ಷ ಉತ್ತರಾಖಂಡ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಗೆಲುವಿಗಾಗಿ ಬಿಜೆಪಿ ರಣತಂತ್ರಗಳನ್ನು ರೂಪಿಸುತ್ತಿದೆ. ಇದರ ಬೆನ್ನಲ್ಲೇ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಕೇದಾರನಾಥಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 6ರಂದು ನಮೋ ಕೇದಾರನಾಥಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎರಡು ದಿನಗಳ ಪ್ರವಾಸದಲ್ಲಿ ಅಲ್ಲಿನ ಬಿಜೆಪಿ ಹಿರಿಯ ನಾಯಕರೊಂದಿಗೆ ಪ್ರಧಾನಿ ಚುನಾವಣಾ ಕಾರ್ಯತಂತ್ರ ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದೇ ವೇಳೆ ಪ್ರಧಾನಿ ರಿಷಿಕೇಶ್‌ನಲ್ಲಿರುವ ಏಮ್ಸ್‌ನ ಆಮ್ಲಜನಕ ಘಟಕವನ್ನು ಉದ್ಘಾಟಿಸಲಿದ್ದಾರೆ ಮತ್ತು ರಿಷಿಕೇಶಿ-ಕರ್ಣಪ್ರಯಾಗ್ ರೈಲು ಮಾರ್ಗವನ್ನು ಪರಿಶೀಲಿಸಲಿದ್ದಾರೆ. ಪ್ರಧಾನಿ ಮೋದಿ ಅವರ ಕೇದಾರನಾಥ ದೇವಸ್ಥಾನದ ಭೇಟಿ ಎರಡನೇ ಬಾರಿಯಾಗಿದೆ.
2019ರಲ್ಲಿ ಅವರು ಕೊನೆಯ ಬಾರಿಗೆ ಇಲ್ಲಿಗೆ ಬಂದು ದೇವರ ದರ್ಶನ ಪಡೆದಿದ್ದರು. ದೀಪಾವಳಿ ಬಳಿಕ ಮುಂದಿನ ಆರು ತಿಂಗಳು ಕೇದಾರನಾಥ ದೇವಾಲಯ ಭಕ್ತರಿಗೆ ಮುಚ್ಚಲ್ಪಡುತ್ತದೆ. ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಮತ್ತವರ ಕುಟುಂಬಗಳನ್ನು ಭೇಟಿ ಮಾಡಲು ಉತ್ತರಾಖಂಡ್ ಬಿಜೆಪಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ.
ಅಲ್ಲಿನ ಸರ್ಕಾರವು ಅಕ್ಟೋಬರ್‌ನಲ್ಲಿ 'ಶಹೀದ್ ಸಮ್ಮಾನ್ ಯಾತ್ರೆ' ಆಯೋಜಿಸಲಿದೆ. ವಿಧಾನಸಭಾ ಚುನಾವಣೆಗೆ ಕೆಲ ತಿಂಗಳ ಮೊದಲು ಈ ಯಾತ್ರೆ ನಡೆಯಲಿದೆ. ಆ ಮೂಲಕ ರಾಜ್ಯದ ಪ್ರತಿ ಹಳ್ಳಿಯ ಮತದಾರರನ್ನು ತಲುಪುವ ಯೋಜನೆ ರೂಪಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಹರಿದ್ವಾರ, ಡೆಹ್ರಾಡೂನ್‌ಗೆ ಭೇಟಿ ನೀಡಲಿದ್ದಾರೆ ಎಂಬ ಊಹಾಪೋಹಗಳು ಕೂಡ ಹಬ್ಬಿವೆ.