ಮುಂಬೈ: ಬಹು ಅಂಗಾಂಗ ವೈಫಲ್ಯದಿಂದ ಇಂದು ಮುಂಜಾನೆ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ಸಂಜೆ ನಡೆಯಲಿದ್ದು, ಅಂತಿಮ ನಮನ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.
'ಲತಾ ದೀದಿ ಅವರಿಗೆ ಅಂತಿಮ ನಮನ ಸಲ್ಲಿಸಲು ಮುಂಬೈಗೆ ತೆರಳುತ್ತೇನೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ ಇಲ್ಲಿನ ಪೆದ್ದಾರ್ ರಸ್ತೆಯಲ್ಲಿರುವ ಅವರ ನಿವಾಸ 'ಪ್ರಭುಕುಂಜ್'ಗೆ ತರಲಾಗಿದೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯು ಸಂಜೆ 6:30ಕ್ಕೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಕೇಂದ್ರ ಸರ್ಕಾರವು ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.
ಇದನ್ನೂ ಓದಿ:ಲತಾ ಮಂಗೇಶ್ಕರ್ ವಿಧಿವಶ: 2 ದಿನಗಳ ರಾಷ್ಟ್ರೀಯ ಶೋಕಾಚರಣೆ ಸರ್ಕಾರ ನಿರ್ಧಾರ
ಗೀತರಚನೆಕಾರ ಜಾವೇದ್ ಅಖ್ತರ್, ನಟ ಅನುಪಮ್ ಖೇರ್, ಶ್ರದ್ಧಾ ಕಪೂರ್ ಸೇರಿದಂತೆ ಹಲವರು ಲತಾ ಮಂಗೇಶ್ಕರ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ್ದಾರೆ.