ಭೋಪಾಲ್ (ಮಧ್ಯಪ್ರದೇಶ):ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 72 ನೇ ಹುಟ್ಟುಹಬ್ಬದಂದು (ಸೆ.17) ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲಿದ್ದಾರೆ. ಅದೇ ದಿನ ದಕ್ಷಿಣ ಆಫ್ರಿಕಾದಿಂದ ಚಿರತೆಗಳನ್ನು ಉದ್ಯಾನಕ್ಕೆ ತರಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು 16 ದಿನಗಳ ಅವಧಿಗೆ ಸೇವಾ ಪಖ್ವಾರ (ಸೇವಾ ಪಾಕ್ಷಿಕ) ಎಂದು ಆಚರಿಸಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ಹಲವು ಕಾರ್ಯಕ್ರಮ ಯೋಜಿಸುತ್ತಿದ್ದಾರೆ. ಇದನ್ನು "ಸೇವಾ ಪಾಕ್ಷಿಕ" ಎಂದು ಆಚರಿಸಲು ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ಮುಖಂಡರಿಗೆ ಅವರು ಸೂಚನೆ ನೀಡಿದ್ದಾರೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.
Modi @20 ಪುಸ್ತಕದ ಪ್ರಚಾರಕ್ಕಾಗಿ ತಂತ್ರ:ಕಾರ್ಯಕ್ರಮಗಳ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ. ಸೆ.17 ರಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅ.2 ರವರೆಗೆ "ಸೇವಾ ಪಖ್ವಾರ" ಆಚರಿಸಲಾಗುತ್ತದೆ. ಪಖ್ವಾರ ಅಡಿ, ಪಕ್ಷವು ಜಿಲ್ಲಾ ಮಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಪ್ರದರ್ಶನಗಳನ್ನು ಆಯೋಜಿಸುತ್ತದೆ. ಇದರೊಂದಿಗೆ "Modi @20 Sapne Hue Sakaar" ಪುಸ್ತಕದ ಪ್ರಚಾರಕ್ಕಾಗಿ ತಂತ್ರ ರೂಪಿಸುತ್ತಿದೆ.
ಇದರ ಜತೆಗೆ ರಕ್ತದಾನ ಶಿಬಿರ ಹಾಗೂ ಉಚಿತ ತಪಾಸಣಾ ಶಿಬಿರ, ಕೃತಕ ಕೈಕಾಲು, ಉಪಕರಣಗಳ ವಿತರಣೆ ಏರ್ಪಡಿಸಲಾಗುವುದು. ಪಕ್ಷವು ದೇಶವನ್ನು ಕ್ಷಯರೋಗ (ಟಿಬಿ) ಮುಕ್ತಗೊಳಿಸಲು ಒಂದು ವರ್ಷದ ಕಾರ್ಯಕ್ರಮ ನಡೆಸುತ್ತದೆ. ಇದರ ಅಡಿ ಪ್ರತಿಯೊಬ್ಬರೂ ಟಿಬಿ ರೋಗಿಯನ್ನು ದತ್ತು ತೆಗೆದುಕೊಳ್ಳುತ್ತಾರೆ ಮತ್ತು ಒಂದು ವರ್ಷದವರೆಗೆ ಅವನನ್ನು ನೋಡಿಕೊಳ್ಳುತ್ತಾರೆ. ಸೇವಾ ಪಖ್ವಾರ ಭಾಗವಾಗಿ, ಕೋವಿಡ್-19 ಬೂಸ್ಟರ್ ಡೋಸ್ ಪ್ರಚಾರಕ್ಕಾಗಿ ಅಭಿಯಾನ ನಡೆಸುತ್ತದೆ.