ನವದೆಹಲಿ:ಉಕ್ರೇನ್ನ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ಪಣತೊಟ್ಟಿದ್ದು, ಅದಕ್ಕೋಸ್ಕರ 'ಆಪರೇಷನ್ ಗಂಗಾ' ಯೋಜನೆ ಹಮ್ಮಿಕೊಂಡಿದೆ. ಈಗಾಗಲೇ 9 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರ ಉಳಿದವರನ್ನು ಕರೆತರಲು ಮುಂದಿನ ಮೂರು ದಿನಗಳಲ್ಲಿ 26 ವಿಮಾನಗಳನ್ನು ಉಕ್ರೇನ್ಗೆ ರವಾನಿಸಲಿದೆ.
ಆದರೆ, ಕಳೆದ ಎರಡು ದಿನಗಳಿಂದ ಉಕ್ರೇನ್ನ ಖಾರ್ಕಿವ್ ಸೇರಿದಂತೆ ವಿವಿಧ ನಗರಗಳ ಮೇಲೆ ರಷ್ಯಾ ಮಿಲಿಟರಿ ದಾಳಿ ಹೆಚ್ಚು ತೀವ್ರತೆ ಪಡೆದುಕೊಂಡಿದ್ದು, ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವುದು ಭಾರತಕ್ಕೆ ಸವಾಲಿನ ಕೆಲಸವಾಗಿದೆ. ಹೀಗಾಗಿ, ಇಂದು ರಾತ್ರಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.