ನವದೆಹಲಿ:ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ 9ನೇ ಕಂತಿನ ಎರಡು ಸಾವಿರ ರೂ. ಹಣ ಇಂದು ಜಮೆಯಾಗಲಿದೆ. ಈ ಆರ್ಥಿಕ ಲಾಭವನ್ನು ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರಧಾನಮಂತ್ರಿ ಕಾರ್ಯಾಲಯ, 'ಕೇಂದ್ರ ಸರ್ಕಾರ ವಾರ್ಷಿಕವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರದಂತೆ ಒಟ್ಟು ಆರು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುತ್ತಿದೆ. ಸುಮಾರು 9 ಕೋಟಿ 75 ಲಕ್ಷ ರೈತರಿಗೆ ಎರಡು ಸಾವಿರ ರೂ ಜಮೆಯಾಗಲಿದೆ. ದೇಶದ 9 ಕೋಟಿ 75 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 19 ಸಾವಿರದ 500 ಕೋಟಿ ರೂಪಾಯಿ ಜಮೆ ಮಾಡಲಾಗುವುದು' ಎಂದು ತಿಳಿಸಿದೆ.