ನವದೆಹಲಿ: ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಬರುವ ಮಹಿಳಾ ಸ್ವ ಸಹಾಯ ಸಂಘಗಳ (SHG) ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12:30 ಕ್ಕೆ 'ಆತ್ಮನಿರ್ಭರ್ ನಾರಿಶಕ್ತಿ ಸೆ ಸಂವಾದ್' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ದೇಶಾದ್ಯಂತ ಇರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ತಮ್ಮ ಯಶೋಗಾಥೆಗಳನ್ನು ಪ್ರಧಾನ ಮಂತ್ರಿ ಅವರ ಜತೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ ಮಹಿಳಾ ಸಾರ್ವತ್ರೀಕರಣಕ್ಕೆ ಸಂಬಂಧಿಸಿದ ಕೈಪಿಡಿಯನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ), ದೇಶದಲ್ಲಿರುವ ಸುಮಾರು 4 ಲಕ್ಷ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಹಣಕಾಸಿನ ನೆರವು ಒದಗಿಸುವ ಹಿನ್ನೆಲೆಯಲ್ಲಿ ಇಂದು 1,625 ಕೋಟಿ ರೂ. ಬಂಡವಾಳ ನಿಧಿಯನ್ನು ಮೋದಿ ಬಿಡುಗಡೆ ಮಾಡಲಿದ್ದಾರೆ. ಜತೆಗೆ ಪ್ರಧಾನ ಮಂತ್ರಿಗಳ 'ಅತಿ ಸಣ್ಣ ಆಹಾರ ಸಂಸ್ಕರಣೆ ಉದ್ದಿಮೆಗಳ ತರ್ಕಬದ್ಧಗೊಳಿಸುವಿಕೆ ಯೋಜನೆ' ಅಡಿ ದೇಶದ 7,500 ಸ್ವಸಹಾಯ ಗುಂಪಿನ ಸದಸ್ಯರಿಗೆ 25 ಕೋಟಿ ರೂ. ಮೂಲ ಧನ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಆಹಾರ ಸಂಸ್ಕರಣೆ ಉದ್ಯಮ ಸಚಿವಾಲಯದ ಯೋಜನೆ ಇದಾಗಿದ್ದು, ಜೊತೆಗೆ ಪ್ರಧಾನ ಮಂತ್ರಿ ಅವರು ಕೃಷಿ ಉತ್ಪಾದಕ ಸಂಘಟನೆ (ಎಫ್ಪಿಒ) ಗಳಿಗೆ 4.13 ಕೋಟಿ ರೂ. ನಿಧಿ ಬಿಡುಗಡೆ ಮಾಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಮೀಣ ಬಡ ಕುಟುಂಬಗಳನ್ನು ಸ್ವಸಹಾಯ ಗುಂಪುಗಳಿಗೆ ಸೇರುವಂತೆ ಉತ್ತೇಜಿಸಿ, ಹಂತ ಹಂತವಾಗಿ ಅವರನ್ನು ನಾನಾ ಕಸುಬು, ಉದ್ದಿಮೆಗಳಿಗೆ ತೊಡಗಿಸಿ, ಆರ್ಥಿಕ ಸ್ವಾವಲಂಬಿಗಳಾಗಿಸುವುದೇ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಕಾರ್ಯಕ್ರಮದ ಉದ್ದೇಶವಾಗಿದೆ.