ನವದೆಹಲಿ :ವಿಶ್ವಕರ್ಮ ಜಯಂತಿ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಕುಶಲಕರ್ಮಿಗಳಿಗಾಗಿ 'ಪಿಎಂ ವಿಶ್ವಕರ್ಮ' ಯೋಜನೆಗೆ ಚಾಲನೆ ನೀಡುವರು. ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಕುಶಲಕರ್ಮಿಗಳಿಗೆ 13,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದೆ. ನವದೆಹಲಿಯ ದ್ವಾರಕಾದಲ್ಲಿರುವ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಶನ್ ಮತ್ತು ಎಕ್ಸ್‌ಪೋ ಸೆಂಟರ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ಪಿಎಂ ವಿಶ್ವಕರ್ಮ ಯೋಜನೆಯು ಸಾಂಪ್ರದಾಯಿಕ ಕರಕುಶಲತೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಲು ಮಾಡಿರುವ ಯೋಜನೆ. 77ನೇ ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಸಾಂಪ್ರದಾಯಿಕ ಕರಕುಶಲತೆಯಲ್ಲಿ ತೊಡಗಿರುವ ನುರಿತ ಕುಶಲಕರ್ಮಿಗಳಿಗೆ ವಿಶೇಷ ಯೋಜನೆ ಘೋಷಿಸುವುದಾಗಿ ಹೇಳಿದ್ದರು. ಇದು ಕುಶಲಕರ್ಮಿಗಳಿಗೆ ನೀಡುವ ಹಣಕಾಸು ನೆರವನ್ನು ಮೀರಿ, ಪ್ರಾಚೀನ ಕರಕುಶಲತೆಗಳು, ಸಂಸ್ಕೃತಿ, ಸ್ಥಳೀಯ ಉತ್ಪನ್ನಗಳಿಂದ ಶ್ರೀಮಂತವಾಗಿರುವ ನಮ್ಮ ಪರಂಪರೆಯನ್ನು ಸಂರಕ್ಷಿಸುವ ಪ್ರಮುಖ ಉದ್ದೇಶ ಹೊಂದಿದೆ ಎಂದು ಕಚೇರಿ ಹೇಳಿದೆ.
ಯೋಜನೆಗೆ ನೋಂದಣಿ ಹೇಗೆ?:ಯೋಜನೆ ಅಡಿಯಲ್ಲಿ ಕರಕುಶಲತೆಯಲ್ಲಿ ತೊಡಗಿರುವ ವ್ಯಕ್ತಿಗಳು ಪಿಎಂ ವಿಶ್ವಕರ್ಮ ಎಂಬ ಪೋರ್ಟಲ್ನಲ್ಲಿ ಬಯೋಮೆಟ್ರಿಕ್ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಂಡ ನುರಿತ ವ್ಯಕ್ತಿಗಳಿಗೆ (ವಿಶ್ವಕರ್ಮರಿಗೆ) ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡಲಾಗುತ್ತದೆ. ಈ ಮೂಲಕ ಕೌಶಲ್ಯವರ್ಧನೆಗೆ ಸಾಧಾರಣ ಮತ್ತು ಉನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ. ತರಬೇತಿ ಸಂದರ್ಭದಲ್ಲಿ 15 ಸಾವಿರ ರೂ ಗೌರವಧನ ನೀಡಲಾಗುತ್ತದೆ. ತರಬೇತಿ ಬಳಿಕ ಸ್ವಉದ್ಯೋಗದಲ್ಲಿ ತೊಡಗಿಕೊಳ್ಳಲು ಮೊದಲ ಕಂತಿನಲ್ಲಿ 1 ಲಕ್ಷ ರೂ ಮತ್ತು ಎರಡನೇ ಕಂತಿನಲ್ಲಿ 2 ಲಕ್ಷ ರೂಪಾಯಿ ಸಾಲವನ್ನು ಶೇ.5ರಷ್ಟು ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ.