ನವದೆಹಲಿ:ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020) ವಾರ್ಷಿಕೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ್ದು, ಈ ವೇಳೆ ಹಲವು ಯೋಜನೆಗಳಿಗೆ ಚಾಲನೆ ನೀಡಿದರು. ಪ್ರಮುಖವಾಗಿ 11 ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ವಿದ್ಯಾಪ್ರವೇಶ್ಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಭಾರತದ ಹೊಸ ಶಿಕ್ಷಣ ನೀತಿ ಮೂಲಕ ವಿಶೇಷ ಹೆಗ್ಗುರುತು ಆರಂಭಗೊಂಡಿದ್ದು, ಇದರಿಂದ ಹೊಸ ಬದಲಾವಣೆ ಹಾಗೂ ಹೊಸ ಹೊಸ ಯೋಜನೆ ಜಾರಿಗೆ ತರಲು ಸಹಕಾರಿಯಾಗುತ್ತದೆ ಎಂದರು. ಈ ಹಿಂದೆ ಉತ್ತಮ ಶಿಕ್ಷಣಕ್ಕೋಸ್ಕರ ಭಾರತದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಬೇಕಾಗಿತ್ತು. ಆದರೆ ಇನ್ಮುಂದೆ ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಉನ್ನತ ಶಿಕ್ಷಣ ಕಲಿಯುತ್ತಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಕಲಿಯುವ ಉದ್ದೇಶದಿಂದ 11 ಭಾಷೆಗಳಲ್ಲಿ ಶಿಕ್ಷಣ ನೀಡಲು ಕೇಂದ್ರ ನಿರ್ಧರಿಸಿದ್ದು, ಇದರಿಂದ ಬಡ, ದಲಿತ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಸುಲಭವಾಗಿ ಶಿಕ್ಷಣ ಸಿಗಲಿದೆ. ಇದಕ್ಕಾಗಿ ನಾನು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮಾತೃ ಭಾಷೆಯಲ್ಲಿ ಶಿಕ್ಷಣ ಸಿಗುವುದರಿಂದ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದ್ದು, ಹಿಂದೂಳಿದ ವರ್ಗದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.