ನವದೆಹಲಿ:ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿಯ ಕೇಂದ್ರವಾದ 'ಸೂರತ್ ಡೈಮಂಡ್ ಬೋರ್ಸ್' ಅನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಲಿದ್ದಾರೆ. 3,400 ಕೋಟಿ ರೂಪಾಯಿ ವೆಚ್ಚದಲ್ಲಿ 35.54 ಎಕರೆ ಭೂಮಿಯಲ್ಲಿ ನಿರ್ಮಿಸಲಾದ ಸೂರತ್ ಡೈಮಂಡ್ ಬೋರ್ಸ್ ಕಟ್ಟಡವು ಒರಟು ಮತ್ತು ಪಾಲಿಶ್ ಮಾಡಿದ ವಜ್ರದ ವ್ಯಾಪಾರದ ಜಾಗತಿಕ ಕೇಂದ್ರವಾಗಲು ಸಜ್ಜಾಗಿದೆ.
ಡೈಮಂಡ್ ಬೋರ್ಸ್ ವಿಶ್ವದ ಅತಿದೊಡ್ಡ ಅಂತರ್ಸಂಪರ್ಕಿತ ಕಟ್ಟಡವಾಗಿದೆ. ಏಕೆಂದರೆ ಇದು 4,500 ಅಂತರ್ಸಂಪರ್ಕಿತ ಕಚೇರಿಗಳನ್ನು ಹೊಂದಿದೆ. ಈ ಕಚೇರಿ ಕಟ್ಟಡವು ಅಮೆರಿಕದ ಪೆಂಟಗನ್‌ಗಿಂತಲೂ ದೊಡ್ಡದಾಗಿದೆ. ಇದು ದೇಶದ ಅತಿದೊಡ್ಡ ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ ಆಗಿದೆ. ಈ ಕಟ್ಟಡ 175 ದೇಶಗಳ 4,200 ವ್ಯಾಪಾರಿಗಳು ಉಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ವ್ಯಾಪಾರಿಗಳು ಪಾಲಿಶ್ ಮಾಡಿದ ವಜ್ರಗಳನ್ನು ಖರೀದಿಸಲು ಸೂರತ್‌ಗೆ ಬರುತ್ತಾರೆ. ಸುಮಾರು 1.5 ಲಕ್ಷ ಜನರು ವ್ಯಾಪಾರ ಸೌಲಭ್ಯದಿಂದ ಉದ್ಯೋಗವನ್ನು ಪಡೆಯುತ್ತಾರೆ. ಪ್ರಪಂಚದ ಎಲ್ಲಾ ಮೂಲೆಗಳಿಂದ ವಜ್ರ ಖರೀದಿಸಲು ಬರುವವರಿಗೆ ಸೂರತ್‌ನಲ್ಲಿ ವ್ಯಾಪಾರ ಮಾಡಲು ಈ ಮೂಲಕ ಜಾಗತಿಕ ವೇದಿಕೆಯನ್ನು ಕಲ್ಪಿಸಲಾಗಿದೆ.
ಸೂರತ್ ಡೈಮಂಡ್ ಬೋರ್ಸ್ ಬಗ್ಗೆ ಪ್ರಧಾನಿ ಮೋದಿ ಮಾತು:''ಸೂರತ್ ಡೈಮಂಡ್ ಬೋರ್ಸ್ ಈಗ ಪೆಂಟಗನ್ ಅನ್ನು ಹಿಂದಿಕ್ಕಿದೆ. ಇದು ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡವನ್ನು ಹೊಂದಿದೆ. ಸೂರತ್ ಡೈಮಂಡ್ ಬೋರ್ಸ್ ಸೂರತ್‌ನ ಡೈಮಂಡ್ ಉದ್ಯಮದ ಚೈತನ್ಯ ಮತ್ತು ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ. ಇದು ಭಾರತದ ಉದ್ಯಮಶೀಲತಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಇದು ವ್ಯಾಪಾರ, ನಾವೀನ್ಯತೆ ಮತ್ತು ಸಹಯೋಗದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಬರೆದಿದ್ದಾರೆ.
ಈ ಕಟ್ಟಡ ನಿರ್ಮಿಸಿದವರು ಯಾರು?:ಭಾರತೀಯ ವಾಸ್ತುಶಿಲ್ಪ ಸಂಸ್ಥೆ ಮಾರ್ಫೋಜೆನೆಸಿಸ್ ಮಾಸ್ಟರ್ ಮೈಂಡ್ ಸೂರತ್ ಡೈಮಂಡ್ ಬೋರ್ಸ್‌ನ ಕಟ್ಟಡವನ್ನು ನಿರ್ಮಿಸಿದೆ. ಈ ಕಟ್ಟಡವು ಅಂತಾರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿತ್ತು. ನಿರ್ಮಾಣ ಪ್ರಾರಂಭವಾಗುವ ಮೊದಲೇ ಎಲ್ಲ ಕಚೇರಿಗಳನ್ನು ವಜ್ರ ಕಂಪನಿಗಳು ಖರೀದಿ ಮಾಡಿವೆ. ಸಣ್ಣ ಮತ್ತು ದೊಡ್ಡ ವ್ಯವಹಾರಗಳಿಗೆ ಪೂರಕವಾಗಲು ವಿನ್ಯಾಸಗೊಳಿಸಲಾಗಿದೆ. ಕಟ್ಟಡದ ಕಚೇರಿಯು ಕೇಂದ್ರ ಕಾರಿಡಾರ್ ಮೂಲಕ ಸಂಪರ್ಕ ಹೊಂದಿದೆ. ಜೊತೆಗೆ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತದೆ ಎಂದು ಮಾರ್ಫೋಜೆನೆಸಿಸ್‌ನ ಸಹ ಸಂಸ್ಥಾಪಕ ಸೋನಾಲಿ ರಸ್ತೋಗಿ ಈ ಹಿಂದೆ ತಿಳಿಸಿದ್ದರು.
ಇದನ್ನೂ ಓದಿ:ತೆಲಂಗಾಣದಲ್ಲಿ ಮತ್ತಷ್ಟು ತಾಪಮಾನ ಕುಸಿಯುವ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ