ನವದೆಹಲಿ: ಇಂದು ಸಂಜೆ ಪ್ರಧಾನಿ ಮೋದಿ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ - 2021ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ಮೂಲಗಳ ಪ್ರಕಾರ ಈ ಬಾರಿಯ ಈ ಶೃಂಗಸಭೆಯ ಘೋಷವಾಕ್ಯ “ನಮ್ಮ ಏಕರೂಪದ ಭವಿಷ್ಯದ ಮರು ವ್ಯಾಖ್ಯಾನ: ಸರ್ವರಿಗೂ ಸುರಕ್ಷಿತ ಮತ್ತು ಸುಭದ್ರ ವಾತಾವರಣ’’ ಎಂಬುದಾಗಿದೆ.
ಗಯಾನ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಡಾ.ಮೊಹಮ್ಮದ್ ಇರ್ಫಾನ್ ಅಲಿ, ಪಪುವಾ ನ್ಯೂಗಿನಿಯಾ ಅಧ್ಯಕ್ಷ ಗೌರವಾನ್ವಿತ ಜೇಮ್ಸ್ ಮರಾಪೆ, ಮಾಡ್ಲವೀಸ್ ಗಣರಾಜ್ಯದ ಮಜ್ಲಿಸ್ ಪೀಪಲ್ಸ್ ಸ್ಪೀಕರ್ ಮೊಹಮ್ಮದ್ ನಶೀದ್, ವಿಶ್ವಸಂಸ್ಥೆಯ ಡೆಪ್ಯೂಟಿ ಸೆಕ್ರೆಟರಿ ಜನರಲ್ ಶ್ರೀಮತಿ ಅಮಿನಾ ಜೆ.ಮೊಹಮ್ಮದ್ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಶ್ರೀ ಪ್ರಕಾಶ್ ಜಾವ್ಡೇಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇಂಧನ ಮತ್ತು ಸಂಪನ್ಮೂಲ ಕೇಂದ್ರ (ಟೆರಿ)ಯ ಮಹತ್ವಾಕಾಂಕ್ಷೆಯ 20ನೇ ಆವೃತ್ತಿಯ ಕಾರ್ಯಕ್ರಮ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಾಗಿದ್ದು, ಇದು ಫೆಬ್ರವರಿ 10ರಿಂದ 12ರವರೆಗೆ ವರ್ಚುಯಲ್ ಮೂಲಕ ನಡೆಯಲಿದೆ. ಈ ಶೃಂಗಸಭೆ ಹವಾಮಾನ ವೈಪರೀತ್ಯದ ವಿರುದ್ಧ ಸೆಣೆಸುತ್ತಿರುವ ಅಸಂಖ್ಯಾತ ಸರ್ಕಾರಿ ಅಧಿಕಾರಿಗಳು, ವಾಣಿಜ್ಯ ನಾಯಕರು, ಶೈಕ್ಷಣಿಕ ತಜ್ಞರು, ಹವಾಮಾನ ವಿಜ್ಞಾನಿಗಳು, ಯುವಕರು ಹಾಗೂ ನಾಗರಿಕ ಸಮಾಜವನ್ನು ಒಂದೆಡೆ ಸೇರಿಸುತ್ತದೆ. ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಭೂ ವಿಜ್ಞಾನಗಳ ಸಚಿವಾಲಯ ಈ ಶೃಂಗಸಭೆಯ ಪ್ರಮುಖ ಪಾಲುದಾರರು. ಹವಾಮಾನ ಹಣಕಾಸು, ಆರ್ಥಿಕತೆ, ಶುದ್ಧ ಸಾಗರಗಳು ಮತ್ತು ವಾಯು ಮಾಲಿನ್ಯ ಮತ್ತಿತರ ಹಲವು ವಿಚಾರಗಳ ಬಗ್ಗೆ ಈ ಶೃಂಗಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.