ನವದೆಹಲಿ: ಪುನರಾಭಿವೃದ್ಧಿಗೊಂಡ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಸಂಕೀರ್ಣ ಜು.26 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇಲ್ಲಿ ಸೆಪ್ಟೆಂಬರ್‌ನಲ್ಲಿ ಜಿ 20 ನಾಯಕರ ಸಭೆ ನಡೆಯಲಿದೆ.
ಪ್ರಗತಿ ಮೈದಾನ ಸಂಕೀರ್ಣ ಎಂದೂ ಕರೆಯಲ್ಪಡುವ ಈ ಸ್ಥಳವು ಸರಿಸುಮಾರು 123 ಎಕರೆಗಳ ಕ್ಯಾಂಪಸ್ ಪ್ರದೇಶ ಹೊಂದಿದೆ. ಇದು ಭಾರತದ ಅತಿದೊಡ್ಡ ಎಂಐಸಿಇ (Meetings, incentives, conferences and exhibitions tourism) ತಾಣ. ಈವೆಂಟ್‌ಗಳಿಗೆ ಲಭ್ಯವಿರುವ ಪುನರಾಭಿವೃದ್ಧಿ ಮತ್ತು ಆಧುನಿಕ ಐಇಸಿಸಿ (ಇಂಟರ್ನ್ಯಾಷನಲ್ ಎನರ್ಜಿ ಕನ್ಸರ್ವೇಶನ್ ಕೋಡ್) ಕಾಂಪ್ಲೆಕ್ಸ್ ವಿಶ್ವದ ಟಾಪ್ 10 ಪ್ರದರ್ಶನ ಮತ್ತು ಸಮಾವೇಶ ಸಂಕೀರ್ಣಗಳಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಳ್ಳಲಿದೆ. ಜರ್ಮನಿಯ ಹ್ಯಾನೋವರ್ ಎಕ್ಸಿಬಿಷನ್ ಸೆಂಟರ್, ಶಾಂಘೈನಲ್ಲಿರುವ ನ್ಯಾಷನಲ್ ಎಕ್ಸಿಬಿಷನ್ ಮತ್ತು ಕನ್ವೆನ್ಷನ್ ಸೆಂಟರ್ (ಎನ್‌ಇಸಿಸಿ) ನಂತಹ ಬೃಹತ್ ಹೆಸರುಗಳಿಗೆ ಇದು ಪ್ರತಿಸ್ಪರ್ಧಿಯಾಗಿದೆ.
ಐಇಸಿಸಿಯ ಹಿರಿಮೆ ಮತ್ತು ಮೂಲಸೌಕರ್ಯ ವಿಶ್ವ ದರ್ಜೆಯ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಯೋಜಿಸುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಕನ್ವೆನ್ಷನ್ ಸೆಂಟರ್‌ನ 3ನೇ ಹಂತದಲ್ಲಿ 7 ಸಾವಿರ ವ್ಯಕ್ತಿಗಳು ಕೂರಬಹುದಾದ ಭವ್ಯ ಆಸನಗಳನ್ನು ಹೊಂದಿದೆ. ಇದು ಆಸ್ಟ್ರೇಲಿಯಾದ ಸಿಡ್ನಿ ಒಪೇರಾ ಹೌಸ್‌ನ ಸರಿಸುಮಾರು 5,500 ಆಸನ ಸಾಮರ್ಥ್ಯಕ್ಕಿಂತ ದೊಡ್ಡದಾಗಿದೆ. ಈ ಪ್ರಭಾವಶಾಲಿ ವೈಶಿಷ್ಟ್ಯವು ಜಾಗತಿಕ ಮಟ್ಟದಲ್ಲಿ ಬೃಹತ್ ಸಮ್ಮೇಳನಗಳು, ಅಂತಾರಾಷ್ಟ್ರೀಯ ಶೃಂಗಸಭೆಗಳು ಮತ್ತು ಸಾಂಸ್ಕೃತಿಕ ಸಂಭ್ರಮಗಳನ್ನು ಆಯೋಜಿಸಲು ಸೂಕ್ತ ಸ್ಥಳವಾಗಿದೆ. ಪ್ರದರ್ಶನ ಸಭಾಂಗಣಗಳು ಉತ್ಪನ್ನಗಳು, ನಾವೀನ್ಯತೆಗಳು ಮತ್ತು ಆಲೋಚನೆಗಳನ್ನು ಪ್ರದರ್ಶಿಸಲು ಏಳು ಹೊಸ ವೇದಿಕೆಯನ್ನು ಹೊಂದಿದೆ.