ನವದೆಹಲಿ:ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನ 246 ಕಿಮೀ ದೆಹಲಿ-ದೌಸಾ-ಲಾಲ್ಸೋಟ್ ಮೊದಲ ಹಂತದ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಲಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಜೈಪುರಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಹೊಸ ಮಾರ್ಗವನ್ನು ನಿಗದಿಪಡಿಸಲಾಗಿದೆ. ಐದು ಗಂಟೆಗಳ ಪ್ರಯಾಣವನ್ನು ಸುಮಾರು ಮೂರೂವರೆ ಗಂಟೆಗಳಿಗೆ ಇಳಿಕೆ ಮಾಡಲು ಸಾಧ್ಯವಾಗುತ್ತದೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ: ಈ ಮಾರ್ಗವನ್ನು 12,150 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಈ ಮೊದಲ ಹಂತದ ಕಾರ್ಯ ಪೂರ್ಣಗೊಂಡಿದೆ. ಈ ಯೊಜನೆಯಿಂದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನ ನೀಡುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ. ಮೋದಿ ಅವರು ನಾಳೆ ಭಾನುವಾರ ದೌಸಾದಿಂದ 18,100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಏರೋ ಇಂಡಿಯಾ 2023ರ 14 ನೇ ಆವೃತ್ತಿಯನ್ನು ಉದ್ಘಾಟಿಸಲು ಸೋಮವಾರ ಅವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 1,386 ಕಿಮೀ ಉದ್ದ ಹೊಂದಿದ್ದು, ಭಾರತದ ಅತಿ ಉದ್ದದ ಮಾರ್ಗವಾಗಿದೆ. ಇದು ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣದ ದೂರವನ್ನು 1,424 ಕಿಮೀಗಳಿಂದ 1,242 ಕಿಮೀಗೆ ಇಳಿಕೆಯಾಗಿದ್ದು, ಶೇಕಡಾ 12 ರಷ್ಟು ಕಡಿಮೆ ಮಾಡುತ್ತದೆ. ಆದರೆ, ಪ್ರಯಾಣದ ಸಮಯವನ್ನು ಪ್ರಸ್ತುತ 24 ಗಂಟೆಗಳಿಂದ 12 ಗಂಟೆಗಳವರೆಗೆ ಅಂದ್ರೆ ಶೇಕಡಾ 50 ರಷ್ಟು ಕಡಿತಗೊಳಿಸಲಾಗುವುದು ಎಂದು ಹೇಳಿದೆ.
ಹಲವು ಪ್ರಮುಖ ನಗರಗಳಿಗೆ ಸಂಪರ್ಕ: ಈ ಎಕ್ಸ್‌ಪ್ರೆಸ್‌ವೇ ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಆರು ರಾಜ್ಯಗಳ ಮೂಲಕ ಹಾದುಹೋಗುತ್ತದೆ ಮತ್ತು ಕೋಟಾ, ಇಂದೋರ್, ಜೈಪುರ, ಭೋಪಾಲ್, ವಡೋದರಾ ಮತ್ತು ಸೂರತ್‌ನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.