ವಾಷಿಂಗ್ಟನ್(ಅಮೆರಿಕಾ):ರಷ್ಯಾ-ಉಕ್ರೇನ್ ಯುದ್ಧ ಹಾಗೂ ಭಾರತದ ನಿಲುವು, ವಿಶ್ವದ ಬಹುತೇಕ ರಾಷ್ಟ್ರಗಳು ರಷ್ಯಾದ ಕ್ರಮವನ್ನು ಖಂಡಿಸಿ ನಿರ್ಬಂಧ ಹೇರಿದ್ದರೂ ಅದೇ ದೇಶದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದ ಭಾರತದ ವಿರುದ್ಧ ಅಮೆರಿಕ ಮುನಿಸಿಕೊಂಡಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜತೆ ಮಹತ್ವದ ವರ್ಚುಲ್ ಸಭೆ ನಡೆಸಲಿದ್ದಾರೆ.
ಉಭಯ ನಾಯಕರು ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವುದು, ಹವಾಮಾನ ಬಿಕ್ಕಟ್ಟನ್ನು ಎದುರಿಸುವುದು, ದ್ವಿಪಕ್ಷೀಯ ಸಹಕಾರ, ದಕ್ಷಿಣ ಏಷ್ಯಾ, ಇಂಡೋ ಪೆಸಿಫಿಕ್ ಬೆಳವಣಿಗೆ, ಜಾಗತಿಕ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಭದ್ರತೆಯನ್ನು ಹೆಚ್ಚಿಸಲು ಮುಕ್ತ, ನಿಯಮ-ಆಧಾರಿತ ಅಂತಾರಾಷ್ಟ್ರೀಯ ಆದೇಶವನ್ನು ಎತ್ತಿಹಿಡಿಯುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಸಂವಾದ ನಡೆಸಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಭಾನುವಾರ (ಸ್ಥಳೀಯ ಕಾಲಮಾನ) ಹೇಳಿದರು.