ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ನೇಮಕವಾಗಿರುವ 71,000 ಮಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರ ನೀಡುವರು ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಇದೇ ವೇಳೆ ಹೊಸದಾಗಿ ನೇಮಕವಾಗುತ್ತಿರುವ ಅಭ್ಯರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರ ನೀಡಲಿದ್ದಾರೆ. ರೋಜ್‌ಗಾರ್ ಮೇಳದ ಮೂಲಕ ಮತ್ತಷ್ಟು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇದು ಯುವ ಸಬಲೀಕರಣ ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಲು ಅವಕಾಶಗಳನ್ನು ನೀಡುತ್ತಿದೆ ಎಂದು ಪಿಎಂಒ ಹೇಳಿದೆ.
ಕೇಂದ್ರದ ವಿವಿಧ ಹುದ್ದೆಗಳಿಗೆ ನೇಮಕಾತಿ: ದೇಶಾದ್ಯಂತ ಭಾರತದ ಸರ್ಕಾರದ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಜ್ಯೂನಿಯರ್ ಇಂಜಿನಿಯರ್, ಲೋಕೋ ಪೈಲಟ್, ಟೆಕ್ನಿಷಿಯನ್, ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್, ಕಾನ್ಸ್ಟೇಬಲ್, ಸ್ಟನೋಗ್ರಾಫರ್, ಜ್ಯೂನಿಯರ್ ಅಕೌಂಟೆಂಟ್, ಗ್ರಾಮೀಣ ಡಕ್ ಸೇವಕ್, ಆದಾಯ ತೆರಿಗೆ ಇನ್ಸ್ಪೆಕ್ಟರ್, ಶಿಕ್ಷಕರು, ನರ್ಸ್, ವೈದ್ಯರು, ಸಾಮಾಜಿಕ ಭದ್ರತಾ ಅಧಿಕಾರಿ, ಪಿಎ, ಎಂಟಿಎಸ್ ಸೇರಿದಂತೆ ಹಲವು ಹುದ್ದೆಗಳಿವೆ.
ರೋಜ್‌ಗಾರ್ ಕಾರ್ಯಕ್ರಮದಲ್ಲಿ ಕರ್ಮಯೋಗಿ ಪ್ರಾರಂಭ್ ಮಾಡ್ಯೂಲ್‌ನಿಂದ ಹೊಸದಾಗಿ ಸೇರ್ಪಡೆಗೊಂಡ ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಕರ್ಮಯೋಗಿ ಪ್ರಾರಂಭ್ ಮಾಡ್ಯೂಲ್ ಎಂಬುದು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಿಗಾಗಿ ಆನ್ಲೈನ್ ಮೂಲಕ ನಡೆಯುವ ಓರಿಯಂಟೇಶನ್ ಕೋರ್ಸ್ ಆಗಿದೆ.
ರೋಜ್‌ಗಾರ್ ಮೇಳದಲ್ಲಿ ಕೇಂದ್ರ ಸಚಿವರು ಭಾಗಿ: ರೋಜ್‌ಗಾರ್ ಮೇಳದಡಿಯಲ್ಲಿ ಯುವಕರಿಗೆ ಉದ್ಯೋಗಗಳನ್ನು ಒದಗಿಸಲು ವಿವಿಧ ಕೇಂದ್ರ ಸಚಿವರು ಜನವರಿಯಲ್ಲಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯೆಲ್, ಹರ್ದೀಪ್ ಪುರಿ, ಅನುರಾಗ್ ಠಾಕೂರ್ ಸೇರಿದಂತೆ ಒಟ್ಟು 45 ಸಚಿವರು ಮೇಳದಲ್ಲಿ ಭಾಗಿಯಾಗಲಿದ್ದಾರೆ.