ನವದೆಹಲಿ: ಪ್ರತಿಷ್ಠಿತ ಜಾಗತಿಕ ಹೂಡಿಕೆದಾರರ ಸಮಾವೇಶವಾದ ಇನ್ವೆಸ್ಟ್ ಕರ್ನಾಟಕ 2022 ರ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 10:30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನೆರವೇರಿಸಿ, ಮಾತನಾಡಲಿದ್ದಾರೆ.
ಬೆಂಗಳೂರಿನಲ್ಲಿ ಇಂದಿನಿಂದ ನವೆಂಬರ್ 4 ರವರೆಗೆ ನಡೆಯುವ ಮೂರು ದಿನಗಳವರೆಗೆ ಸಮಾವೇಶವು ಭವಿಷ್ಯದ ಹೂಡಿಕೆದಾರರನ್ನು ಆಕರ್ಷಿಸುವ ಗುರಿ ಹೊಂದಿದೆ. ಮುಂದಿನ ದಶಕದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಸೂಚಿಗಳ ಕುರಿತು ಚರ್ಚೆ ನಡೆಯಲಿದೆ. ಈ ಸಮಾವೇಶ ಬಂಡವಾಳ ಹೂಡಿಕೆಗಷ್ಟೇ ಸೀಮಿತವಾಗಿಲ್ಲ. ಕರ್ನಾಟಕದ ಸಾಂಸ್ಕೃತಿಕ ಲೋಕವೂ ಅನಾವರಣಗೊಳ್ಳಲಿದೆ. ಮುನ್ನೂರಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ವಸ್ತುಗಳ ವ್ಯಾಪಾರ ಪ್ರದರ್ಶನ ನಡೆಸುವರು. ಜಾಗತಿಕ ಮಟ್ಟದ ಕಾರ್ಯಕ್ರಮವು ಕರ್ನಾಟಕಕ್ಕೆ ತನ್ನ ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸಲು ಅತ್ಯುತ್ತಮ ಅವಕಾಶವನ್ನು ನೀಡಲಿದೆ.
ಇದನ್ನೂ ಓದಿ:10 ಲಕ್ಷ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ: ಪ್ರಧಾನಿ ಮೋದಿ
'5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಇದರಿಂದ 5 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆ ಹೊಂದಿರುವ ಕರ್ನಾಟಕ, ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣ' ಎಂದು ಸಚಿವ ಮುರುಗೇಶ್ ಆರ್ ನಿರಾಣಿ ತಿಳಿಸಿದ್ದಾರೆ.
ಪ್ರಮುಖ ಉದ್ಯಮಿಗಳು ಭಾಗಿ:ಜೆಎಸ್‌ಡ್ಬ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್, ಸ್ಟೆರ್ಲೈಟ್ ಪವರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಅಗರ್‌ವಾಲ್, ಅದಾನಿ ಪೋರ್ಟ್ ಮತ್ತು ಎಸ್‌ಇಝಡ್‌ನ ಕರಣ್ ಗೌತಮ್ ಅದಾನಿ, ಭಾರ್ತಿ ಎಂಟರ್‌ಪ್ರೈಸಸ್‌ನ ರಾಜನ್ ಭಾರ್ತಿ ಮಿತ್ತಲ್, ವಿಪ್ರೊ ಅಧ್ಯಕ್ಷ ರಿಶದ್ ಪ್ರೇಮ್‌ಜಿ, ವಿಕ್ರಂ ಕಿರ್ಲೋಸ್ಕರ್, ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕೆ.ಎಂ.ಬಿರ್ಲಾ ಸೇರಿದಂತೆ ಉನ್ನತ ಉದ್ಯಮ ನಾಯಕರು ಭಾಗಿಯಾಗಲಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಭಗವಂತ ಖೂಬಾ, ನಿತಿನ್ ಗಡ್ಕರಿ ಭಾಗವಹಿಸುವರು.
ಇದನ್ನೂ ಓದಿ:'ಕರ್ನಾಟಕದಲ್ಲಿ ನಿಮ್ಮದೇ ಪ್ರಪಂಚ ಸೃಷ್ಟಿಸಿ': ರಾಯಭಾರಿಗಳಿಗೆ ಸಿಎಂ ಬೊಮ್ಮಾಯಿ ಕರೆ