ನವ ದೆಹಲಿ: ಚುನಾವಣೆಯಲ್ಲಿ ಬಿಜೆಪಿಗೆ ಸಿಗುತ್ತಿರುವ ಜನಬಲವು ವಂಶಪಾರಂಪರ್ಯ ಮತ್ತು ಭ್ರಷ್ಟಾಚಾರ ವಿರುದ್ಧದ ಆಕ್ರೋಶದ ಸಂಕೇತವಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸುತ್ತಿರುವುದರಿಂದ ಬಿಜೆಪಿಗೆ ಜನ ಮತ ಹಾಕುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಗುಜರಾತ್‌ನಲ್ಲಿ ಬಿಜೆಪಿಯ ಪ್ರಚಂಡ ಗೆಲುವಿನ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ಇತಿಹಾಸದಲ್ಲಿ ಬಿಜೆಪಿಗೆ ಅತಿದೊಡ್ಡ ಜನಾದೇಶ ನೀಡುವ ಮೂಲಕ ಎಲ್ಲ ದಾಖಲೆಗಳೂ ಮುರಿದಿವೆ ಎಂದು ಹೇಳಿದರು.
ಗುಜರಾತ್ ಕಮಾಲ್ ಮಾಡಿಬಿಟ್ಟಿದೆ. 27 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಜನರು ಇನ್ನೂ ಬಿಜೆಪಿಯ ಮೇಲೆ ಅಪಾರ ಪ್ರೀತಿಯನ್ನು ತೋರಿಸಿದ್ದಾರೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ. ಬಿಜೆಪಿಯು ಗುಜರಾತ್ನ ಪ್ರತಿ ಮನೆ ಮತ್ತು ಕುಟುಂಬದ ಭಾಗವೇ ಆಗಿದೆ ಎಂದು ಮೋದಿ ಹೊಗಳಿದರು.
ಇದನ್ನೂ ಓದಿ:ಮೋದಿ ಮನವಿಗೆ ಗುಜರಾತ್ ಮಣೆ; ಹಿಮಾಚಲದಲ್ಲಿ ನಡೆಯದ ಕೇಸರಿ ಕಮಾಲ್: ಕಾರಣಗಳಿವು..
ಇದೇ ವೇಳೆ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ಮುಗಿಸಿದ ಚುನಾವಣಾ ಆಯೋಗಕ್ಕೂ ಧನ್ಯವಾದ ಹೇಳಿದ ಪ್ರಧಾನಿ, ನನಗೆ ತಿಳಿದಿರುವಂತೆ ಯಾವುದೇ ಮತಗಟ್ಟೆಯಲ್ಲಿ ಮರು ಮತದಾನದ ಅಗತ್ಯವಿಲ್ಲ ಎಂದರು.