ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಡೆನ್ಮಾರ್ಕ್‌ಗೆ ಬಂದಿಳಿದಿದ್ದಾರೆ. ಜರ್ಮನಿ ಭೇಟಿ ಕುರಿತು ಟ್ವೀಟ್ ಮಾಡಿರುವ ಅವರು, ನನ್ನ ಜರ್ಮನಿ ಭೇಟಿಯೂ ಫಲಕಾರಿಯಾಗಿದೆ. ಜರ್ಮನ್ ಸರ್ಕಾರಕ್ಕೆ ಧನ್ಯವಾದ ಎಂದಿದ್ದಾರೆ. ವ್ಯಾಪಾರ ಮತ್ತು ಭಾರತೀಯ ಸಮುದಾಯದ ನಾಯಕರೊಂದಿಗೆ ಮಾತುಕತೆ ನಡೆಸಲು ನನಗೆ ಉತ್ತಮ ಅವಕಾಶ ದೊರೆಯಿತು. ಅವರ ಆತಿಥ್ಯಕ್ಕಾಗಿ ನಾನು ಜರ್ಮನ್ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಕೋಪನ್‌ಹೇಗನ್‌ನಲ್ಲಿ ಡ್ಯಾನಿಶ್ ಕೌಂಟರ್‌ಪಾರ್ಟ್ ಮೆಟ್ಟೆ ಫ್ರೆಡೆರಿಕ್ಸೆನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಡೆನ್ಮಾರ್ಕ್, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್, ಸ್ವೀಡನ್ ಮತ್ತು ನಾರ್ವೆಯ ಪ್ರಧಾನಮಂತ್ರಿಗಳೊಂದಿಗೆ 2ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಆರ್ಥಿಕ ಚೇತರಿಕೆ, ಹವಾಮಾನ ಬದಲಾವಣೆ, ನಾವೀನ್ಯತೆ ಮತ್ತು ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ವಿಕಸನಗೊಳ್ಳುತ್ತಿರುವ ಜಾಗತಿಕ ಭದ್ರತಾ ಸನ್ನಿವೇಶ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ಭಾರತ-ನಾರ್ಡಿಕ್ ಸಹಕಾರದಂತಹ ವಿಷಯಗಳ ಮೇಲೆ ಶೃಂಗಸಭೆಯಲ್ಲಿ ಚರ್ಚಿಸಲಾಗುವುದು. 1ನೇ ಭಾರತ-ನಾರ್ಡಿಕ್ ಶೃಂಗಸಭೆಯು 2018ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆಯಿತು.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಮಧ್ಯೆ ಪ್ರಧಾನಿ ಮೋದಿಯವರು ಮೂರು ರಾಷ್ಟ್ರಗಳ ಯುರೋಪ್ ಭೇಟಿ ಮಾಡುತ್ತಿದ್ದಾರೆ. ಸೋಮವಾರ ಜರ್ಮನಿಯ ಚಾನ್ಸೆಲರ್ ಅವರೊಂದಿಗಿನ ಮಾತುಕತೆಯ ನಂತರ, ಪ್ರಧಾನಿ ಮೋದಿ ಅವರು ಈ ಯುದ್ಧದಲ್ಲಿ ಗೆಲ್ಲುವುದಿಲ್ಲ, ಎಲ್ಲರೂ ಬಳಲುತ್ತಿದ್ದಾರೆ ಎಂದರು.
ಉಕ್ರೇನ್ ಸಂಘರ್ಷದಿಂದ ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಜಗತ್ತಿನಲ್ಲಿ ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಕೊರತೆಯೂ ಇದೆ. ಇದು ಪ್ರಪಂಚದ ಪ್ರತಿ ಕುಟುಂಬಕ್ಕೂ ಹೊರೆಯಾಗಿದೆ. ಆದರೆ, ಅಭಿವೃದ್ಧಿಶೀಲ ಮತ್ತು ಬಡ ದೇಶಗಳ ಮೇಲೆ ಇದರ ಪರಿಣಾಮವು ಇನ್ನಷ್ಟು ಗಂಭೀರವಾಗಿರುತ್ತದೆ. ಈ ಯುದ್ಧದ ಬಗ್ಗೆ ಭಾರತವು ಆಳವಾಗಿ ಕಳವಳಗೊಂಡಿದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ:'ಮೋದಿ ಒನ್ಸ್ ಮೋರ್'.. ಬರ್ಲಿನ್ನಲ್ಲಿ ಭಾರತೀಯ ಸಮುದಾಯದವರಿಂದ ಘೋಷಣೆ!
ಜೂನ್ ಕೊನೆಯ ವಾರದಲ್ಲಿ ಜರ್ಮನಿಯಲ್ಲಿ ನಡೆಯಲಿರುವ ಜಿ7 ಸಭೆಗೆ ಜರ್ಮನಿಯ ಚಾನ್ಸಲರ್ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಗ್ರೀನ್ ಸ್ಟ್ರಾಟೆಜಿಕ್ ಪಾಲುದಾರಿಕೆಯು ಭಾರತ ಮತ್ತು ಡೆನ್ಮಾರ್ಕ್ ನಡುವಿನ ಮೊದಲ ರೀತಿಯ ವ್ಯವಸ್ಥೆಯಾಗಿದೆ. ಭೇಟಿಯು ಅದರ ಪ್ರಗತಿಯನ್ನು ಪರಿಶೀಲಿಸಲು ಎರಡೂ ಕಡೆಯವರಿಗೆ ಅವಕಾಶವನ್ನು ಒದಗಿಸುತ್ತದೆ. ಮೇ 4ರಂದು ಪ್ರಧಾನಿ ಮೋದಿ ಪ್ಯಾರಿಸ್ಗೆ ಹೋಗಲಿದ್ದು, ಅಲ್ಲಿ ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಲಿದ್ದಾರೆ.