ದೌಸಾ (ರಾಜಸ್ಥಾನ): ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಗಡಿ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಯಾಕೆಂದರೆ, ಶತ್ರುಗಳು ದೇಶಕ್ಕೆ ಪ್ರವೇಶಿಸಲು ಹೊಸ ರಸ್ತೆಗಳನ್ನು ಬಳಸಿಕೊಳ್ಳಬಹುದು ಎಂಬ ಭಯ ಕಾಂಗ್ರೆಸ್ನವರಿಗೆ ಕಾಡುತ್ತಿತ್ತು. ಈ ಮೂಲಕ ಸಶಸ್ತ್ರ ಪಡೆಗಳ ಶೌರ್ಯವನ್ನೂ ಕಡೆಗಣಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ದೌಸಾದಲ್ಲಿ ಪ್ರಧಾನಿ ಭಾನುವಾರ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇನ 18,000 ಕೋಟಿಗೂ ಅಧಿಕ ವೆಚ್ಚದ ನಾಲ್ಕು ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ದೆಹಲಿ - ದೌಸಾ - ಲಾಲ್ಸೋಟ್ ನಡುವಿನ 246 ಕಿಲೋಮೀಟರ್ ಉದ್ದದ ಮೊದಲ ಹಂತದ ಯೋಜನೆಯನ್ನು ರಿಮೋಟ್‌ನ ಬಟನ್ ಒತ್ತುವ ಮೂಲಕ ಲೋಕಾರ್ಪಣೆ ಮಾಡಿದರು. ಇದಾದ ನಂತರ ಕಾರ್ಯಕ್ರಮದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಹೊಮ್ಮಿಕೊಂಡಿದ್ದ ಬಿಜೆಪಿ ಸಮಾವೇಶ ಉದ್ದೇಶಿಸಿ ಮೋದಿ ಮಾತನಾಡಿದರು.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ದೂರದೃಷ್ಟಿಯ ಕೊರತೆ ಇದೆ. ಜೊತೆಗೆ ಈ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಸರ್ಕಾರದ ಯೋಜನೆಗಳು ಮತ್ತು ಘೋಷಣೆಗಳು ಕೇವಲ ಕಾಗದದಲ್ಲಿ ಉಳಿದಿವೆ. ರಾಜಸ್ಥಾನದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿದ್ದರೆ, ರಾಜ್ಯವು ಇನ್ನೂ ಉತ್ತಮವಾಗಿ ಪ್ರಗತಿ ಹೊಂದುತ್ತಿತ್ತು ಎಂದು ಪ್ರಧಾನಿ ಮೋದಿ ಹೇಳಿದರು.
ಹಿಂದಿನ ಕಾಂಗ್ರೆಸ್ ಸರ್ಕಾರಗಳು ಗಡಿ ಗ್ರಾಮಗಳು ಮತ್ತು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನೇ ಮಾಡಲಿಲ್ಲ. ಯಾಕೆಂದರೆ, ಕಾಂಗ್ರೆಸ್ನವರು ಭಯದಲ್ಲಿ ಇರುತ್ತಿದ್ದರು. ಅಲ್ಲದೇ, ನಾವು ಮಾಡಿದ ರಸ್ತೆಗಳಲ್ಲಿ ಶತ್ರುಗಳು ಬಂದರೆ ಏನಾಗುತ್ತದೆ ಎಂದು ಕಾಂಗ್ರೆಸ್ನವರು ಸಂಸತ್ತಿನಲ್ಲಿ ಹೇಳಿಕೆ ಕೊಟ್ಟಿದ್ದರು ಎಂದು ಆರೋಪಿಸಿದರು.
ಇಷ್ಟೇ ಅಲ್ಲ, ಕಾಂಗ್ರೆಸ್ ಯಾವಾಗಲೂ ನಮ್ಮ ಸೈನಿಕರ ಶೌರ್ಯ ಕಡೆಗಣಿಸಿದೆ. ಜೊತೆಗೆ ಯೋಧರ ಶೌರ್ಯವನ್ನು ಕಡಿಮೆ ಅಂದಾಜು ಮಾಡುತ್ತದೆ. ಆದರೆ, ಗಡಿಯಲ್ಲಿ ಶತ್ರುಗಳನ್ನು ಹೇಗೆ ನಿಲ್ಲಿಸಬೇಕು ಮತ್ತು ತಕ್ಕ ಪ್ರತ್ಯುತ್ತರವನ್ನು ಹೇಗೆ ನೀಡಬೇಕೆಂದು ನಮ್ಮ ಭದ್ರತಾ ಪಡೆಗಳಿಗೆ ಗೊತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಗಡಿ ಪ್ರದೇಶಗಳಲ್ಲಿ ನಮ್ಮ ಸರ್ಕಾರ ರಸ್ತೆ ಮತ್ತು ರೈಲು ಸಂಪರ್ಕವನ್ನು ರಚಿಸಿದೆ ಎಂದು ಪ್ರಧಾನಿ ಹೇಳಿದರು.
ಗೆಹ್ಲೋಟ್ ಬಗ್ಗೆ ಮೋದಿ ಲೇವಡಿ: ಶುಕ್ರವಾರ ರಾಜ್ಯದ 2023-24ರ ಬಜೆಟ್ ಮಂಡಿಸುವಾಗ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಿಂದಿನ ವರ್ಷದ ಬಜೆಟ್‌ನ ಆಯ್ದ ಭಾಗಗಳನ್ನು ಓದಿದ ಬಗ್ಗೆಯೂ ಮೋದಿ ಪ್ರಸ್ತಾಪಿಸಿ, ಯಾರಾದರೂ ತಪ್ಪು ಮಾಡಬಹುದು. ಆದರೆ, ಇದು ಕಾಂಗ್ರೆಸ್‌ಗೆ ದೂರದೃಷ್ಟಿ ಇಲ್ಲ. ಅದರ ಯೋಜನೆಗಳಲ್ಲೂ ಆಕರ್ಷಣೆಗಳು ಇಲ್ಲ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಘೋಷಣೆಗಳು ಕೇವಲ ಕಾಗದದಲ್ಲಿ ಉಳಿದಿವೆ ಎಂದು ಲೇವಡಿ ಮಾಡಿದರು.
13 ಜಿಲ್ಲೆಗಳ ನೀರಿನ ಸಮಸ್ಯೆಗೆ ಪರಿಹಾರ: ಇದಕ್ಕೂ ಮುನ್ನ ಎಕ್ಸ್‌ಪ್ರೆಸ್‌ವೇ ಉದ್ಘಾಟನಾ ಸಮಾರಂಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಮತ್ತು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ವಿಡಿಯೋ ಲಿಂಕ್ ಮೂಲಕ ಮಾತನಾಡಿದರು. ಈ ವೇಳೆ ಪೂರ್ವ ರಾಜಸ್ಥಾನ ನಾಲಾ ಯೋಜನೆ (ಇಆರ್‌ಸಿಪಿ)ಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಸಬೇಕು ಮತ್ತು 13 ಪೂರ್ವ ರಾಜಸ್ಥಾನ ಜಿಲ್ಲೆಗಳಲ್ಲಿನ ನೀರಿನ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿ ನಿರ್ಧಾರ ಕೈಗೊಳ್ಳಬೇಕೆಂದು ಸಿಎಂ ಗೆಹ್ಲೋಟ್ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಪೂರ್ವ ರಾಜಸ್ಥಾನದ 13 ಜಿಲ್ಲೆಗಳಲ್ಲಿ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗೆ ಕೇಂದ್ರವು ಬದ್ಧವಾಗಿದೆ. ಮಧ್ಯಪ್ರದೇಶದ ಇಸಿಆರ್‌ಪಿ ಮತ್ತು ಹಳೆಯ ಪಾರ್ವತಿ-ಕಲಿಸಿಂಧ್-ಚಂಬಲ್ ಲಿಂಕ್ಅನ್ನು ಸಂಯೋಜಿಸುವ ಪ್ರಮುಖ ಯೋಜನೆಯ ಕರಡನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಸಚಿವರಾದ ವಿ ಕೆ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್ ಪಾಲ್ಗೊಂಡಿದ್ದರು.
ಇದನ್ನೂ ಓದಿ:ದಯಾನಂದ ಸರಸ್ವತಿ 200ನೇ ಜನ್ಮ ದಿನಾಚರಣೆ.. ವರ್ಷಪೂರ್ತಿ ಕಾರ್ಯಕ್ರಮಗಳಿಗೆ ಪ್ರಧಾನಿ ಚಾಲನೆ