ನವದೆಹಲಿ :ಸಿಖ್ಖರ 10ನೇ ಪ್ರಮುಖ ಗುರುಗಳಾದಗುರುಗೋವಿಂದ ಸಿಂಗ್ ಅವರ ಪುತ್ರರ ಸ್ಮರಣಾರ್ಥವಾಗಿ ಆಯೋಜಿಸಲಾಗುವ 'ವೀರ್ ಬಾಲ್ ದಿವಸ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಇಲ್ಲಿನ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಬಾದ್ ಕೀರ್ತನೆ ಹಾಡಿದರು. ವೀರ್ ಬಾಲ್ ದಿವಸ್ ನಿಮಿತ್ತ ಸುಮಾರು 3,000 ವಿದ್ಯಾರ್ಥಿಗಳಿಂದ ಪಥ ಸಂಚಲನ ಮತ್ತು ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಪ್ರಧಾನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಐತಿಹಾಸಿಕ ಸಂದರ್ಭವನ್ನು ಸ್ಮರಣೀಯಗೊಳಿಸಲು ಕೇಂದ್ರ ಸರ್ಕಾರವು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ವಿಶೇಷವಾಗಿ ಮಕ್ಕಳಿಗೆ ಸಾಹಿಬ್ ಜಾದಾಸ್ ಅವರ ಧೈರ್ಯದ ಬಗ್ಗೆ ತಿಳಿಸಲಾಗುತ್ತಿದೆ. 'ವೀರ್ ಬಾಲ್ ದಿವಸ್ ಸಂದರ್ಭದಲ್ಲಿ ನಾವು ಸಾಹಿಬ್ ಜಾದಾಸ್ ಮತ್ತು ಮಾತಾ ಗುಜ್ರಿ ಜಿಯವರ ಧೈರ್ಯಗಾಥೆಯನ್ನು ಸ್ಮರಿಸುತ್ತೇವೆ. ಜೊತೆಗೆ ಶ್ರೀ ಗುರುಗೋವಿಂದ್ ಸಿಂಗ್ ಜಿ ಅವರ ಸಾಹಸಗಾಥೆಯನ್ನೂ ನೆನಪಿಸಿಕೊಳ್ಳುತ್ತೇವೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.