ನವದೆಹಲಿ:ಬಿಜೆಪಿ ಸಂಸದೀಯ ಸಭೆಯಲ್ಲಿ ಪಕ್ಷದ ಸಂಸದರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರತಿಪಕ್ಷಗಳ ಮೈತ್ರಿಯನ್ನು 'ಘಮಾಂಡಿಯಾ' (ಅಹಂಕಾರ) ಎಂದು ಬಣ್ಣಿಸಿದರು. ಘಮಾಂಡಿಯಾ ಹಿಂದಿ ಪದ. ಸೊಕ್ಕು, ಅಹಂಕಾರ ಇದರ ಅರ್ಥವಾಗಿದೆ.
ನಮ್ಮ ಸರ್ಕಾರ ವಿರುದ್ಧ ವಿರೋಧ ಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯವು ಇಂಡಿಯಾ(INDIA)ಮೈತ್ರಿಕೂಟದಲ್ಲಿ ಪಕ್ಷಗಳ ನಡುವೆ ಪರಸ್ಪರ ಅಪನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ತಮ್ಮ ಪ್ರಸ್ತಾಪದೊಂದಿಗೆ ಯಾರೂ ಇಲ್ಲ ಎಂಬುದನ್ನು ಪರೀಕ್ಷಿಸಲು ಈ ಮೈತ್ರಿಕೂಟ ಮುಂದಾಗಿದೆ. ಅವರ ಮಧ್ಯೆಯೇ ಪರಸ್ಪರ ನಂಬಿಕೆಯಿಲ್ಲ ಎಂದು ಕಾಣಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ದೆಹಲಿ ಸೇವಾ ಮಸೂದೆಯ ಮೇಲೆ ಮತದಾನವನ್ನು ಸೆಮಿಫೈನಲ್ ನಲ್ಲಿ ಗೆಲುವು ಕಂಡಿದೆ ಎಂದು ಬಣ್ಣಿಸಿ ಅದಕ್ಕೆ ರಾಜ್ಯಸಭಾ ಸದಸ್ಯರನ್ನು ಅಭಿನಂದಿಸಿದರು. ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮೋದಿ 2024ರ ಲೋಕಸಭೆ ಚುನಾವಣೆಗೆ ಮೊದಲು ರಾಜ್ಯಸಭೆಯಲ್ಲಿ ಮತದಾನವನ್ನು ಸೆಮಿಫೈನಲ್ ಎಂದು ಬಣ್ಣಿಸಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಶಾಹಿಯ ಮೇಲೆ ಕೇಂದ್ರದ ನಿಯಂತ್ರಣವನ್ನು ನೀಡುವ ವಿವಾದಾತ್ಮಕ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದ ನಂತರ ದೆಹಲಿ ಸೇವಾ ಮಸೂದೆ ಸೋಮವಾರ ಸಂಸತ್ತಿನ ಅನುಮೋದನೆ ಪಡೆದುಕೊಂಡಿದೆ. ಲೋಕಸಭೆಯಲ್ಲಿ ಆಡಳಿತ ಪಕ್ಷ ಬಹುಮತ ಹೊಂದಿರುವುದರಿಂದ ಅವಿಶ್ವಾಸ ನಿರ್ಣಯವನ್ನು ಸೋಲಿಸುವುದು ಖಚಿತವೆಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಅವರ ನಾಯಕರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ರಾಜವಂಶ, ತುಷ್ಟೀಕರಣ ಮತ್ತು ಭ್ರಷ್ಟ ರಾಜಕೀಯದಿಂದ ಹೆಚ್ಚು ಹಾನಿ ಮಾಡಿದ್ದಾರೆ ಎಂದು ಹೇಳಿದರು.