ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ಇಲ್ಲಿನ ನೂತನ ಸಂಸತ್ ಭವನಕ್ಕೆ ದಿಢೀರ್ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಇದರ ಜೊತೆಗೆ, ಕಟ್ಟಡದೊಳಗೆ ಒಂದು ಗಂಟೆಗೂ ಹೆಚ್ಚು ಸಮಯ ಕಳೆದಿದ್ದಾರೆ. ಕಾರ್ಮಿಕರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಆಗಮಿಸಿದ ನರೇಂದ್ರ ಮೋದಿ, ಸಂಸತ್ತಿನ ಉಭಯ ಸದನಗಳಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದ್ದಾರೆ. ಈ ಹಿಂದೆ, ಕಳೆದ ವರ್ಷದ ನವೆಂಬರ್ ತಿಂಗಳ ವೇಳೆಗೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ನೂತನ ಕಟ್ಟಡ ಶೀಘ್ರದಲ್ಲೇ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ :ಕೋವಿಡ್ ವೇಳೆ ನೂತನ ಸಂಸತ್ ಭವನ, ಪಿಎಂ ನಿವಾಸವಿರುವ 'ಸೆಂಟ್ರಲ್ ವಿಸ್ತಾ' ಬೇಕೇ? ನಾಳೆ ದೆಹಲಿ ಹೈಕೋರ್ಟ್ ತೀರ್ಪು
2020 ರ ಡಿಸೆಂಬರ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಸಂಸತ್ ಭವನದ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಿದ್ದರು. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ 2020 ರಲ್ಲಿ 971 ಕೋಟಿ ರೂ. ವೆಚ್ಚದ ಯೋಜನೆ ನೀಡಿದ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಆದಾಗ್ಯೂ, ಕಚ್ಚಾ ಸಾಮಗ್ರಿ ದರ ಹೆಚ್ಚಳದಿಂದಾಗಿ ಯೋಜನಾ ವೆಚ್ಚವನ್ನೂ ಹೆಚ್ಚಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ :ನೂತನ ಸಂಸತ್ ಭವನ ನಿರ್ಮಾಣಕ್ಕೆ ಪಾರಂಪರಿಕಾ ಸಂರಕ್ಷಣಾ ಸಮಿತಿಯಿಂದ ಅನುಮೋದನೆ