ನವದೆಹಲಿ: ಕೋವಿಡ್-19 ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ತಮಿಳು ನಾಡುಗಳ ಮುಖ್ಯಮಂತ್ರಿಗಳೊಂದಿಗೆ ಇಂದು (ಶನಿವಾರ) ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ತಾವು ಪ್ರಧಾನಿಯೊಂದಿಗೆ ಚರ್ಚೆ ನಡೆಸಿದ ಮಾಹಿತಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್, ಮಧ್ಯ ಪ್ರದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಬಗ್ಗೆ ಪ್ರಧಾನಿ ಮೋದಿ ಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಸಿಎಂ ಚೌಹಾಣ್ ಪ್ರಧಾನಿಯವರಿಗೆ ವಿವರಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರದ ಸಹಕಾರಕ್ಕೆ ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ.