ನವದೆಹಲಿ: ಇಂದು ಬೌದ್ಧ ಧರ್ಮಗುರು, ನೋಬೆಲ್ ಪ್ರಶಸ್ತಿ ಪುರಸ್ಕೃತ ದಲೈಲಾಮಾ ಅವರ 87ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮೂಲಕ ದಲೈಲಾಮಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ 'ದಲೈಲಾಮಾ ಅವರಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನ ಲಭಿಸಲೆಂದು' ಪ್ರಾರ್ಥಿಸುವುದಾಗಿ ಶುಭ ಹಾರೈಸಿದ್ದಾರೆ.
ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಪ್ರತಿ ವರ್ಷ ಅವರ ಜನ್ಮದಿನಾಚರಣೆಗಳನ್ನು ಟಿಬೆಟಿಯನ್ ಸಮುದಾಯವು ಹಬ್ಬದಂತೆ ಆಚರಣೆ ಮಾಡುತ್ತದೆ. ಜುಲೈ 6 ಅನ್ನು 14 ನೇ ದಲೈ ಲಾಮಾ ಅವರ "ಅವತಾರ ದಿನ" ಎಂದು ಆಚರಿಸಲಾಗುತ್ತದೆ. ಈ ವರ್ಷವೂ ಮೆಕ್ಲಿಯೋಡ್ಗಂಜ್ನಲ್ಲಿರುವ ಸುಗ್ಲಾಗ್‌ಖಾಂಗ್‌ನಲ್ಲಿ ಹುಟ್ಟುಹಬ್ಬ ಮಾಡಲಾಗಿದ್ದು, ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಭಾಗವಹಿಸಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಜೈರಾಮ್ ಠಾಕೂರ್, "ನಾನು ದಲೈಲಾಮಾ ಅವರೊಂದಿಗೆ ಸ್ವಲ್ಪ ಸಮಯದ ಹಿಂದೆ ಫೋನ್‌ನಲ್ಲಿ ಮಾತನಾಡಿದೆ. ಅವರು ಸಂತಸ ವ್ಯಕ್ತಪಡಿಸಿದರು. ಜೊತೆಗೆ ದೇವಭೂಮಿ ಹಿಮಾಚಲದಲ್ಲಿ ವಾಸಿಸುವ ಅವಕಾಶ ನೀಡಿದ್ದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು" ಎಂದರು.