ಚಂಡೀಗಢ (ಪಂಜಾಬ್):ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದಾಗ ಭದ್ರತಾಲೋಪ ಉಂಟಾಗಿ ದೆಹಲಿಗೆ ವಾಪಸಾಗಿದ್ದರು. ಇದು ಆತಂಕ ಸೃಷ್ಟಿಸಿದ್ದಲ್ಲದೇ, ಪ್ರಧಾನಿಗೆ ಭದ್ರತೆ ನೀಡದ ಪಂಜಾಬ್‌ನ ಆಪ್ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಇದೀಗ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಸೂಚಿಸಿದ್ದಾರೆ.
ಪ್ರಧಾನಿ ಭೇಟಿ ನೀಡುವ ಮಾರ್ಗದ ನಿರ್ವಹಣೆ ಹೊಣೆ ಹೊತ್ತಿದ್ದ ಅಂದಿನ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಎಸ್ ಚಟ್ಟೋಪಾಧ್ಯಾಯ, ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್(ಡಿಐಜಿ) ಇಂದರ್‌ಬೀರ್ ಸಿಂಗ್ ಮತ್ತು ಫಿರೋಜ್‌ಪುರದ ಅಂದಿನ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಹರ್ಮನ್‌ದೀಪ್ ಸಿಂಗ್ ಹನ್ಸ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಪಂಜಾಬ್ ಸಿಎಂ ಆದೇಶಿಸಿದ್ದಾರೆ. ಈ ಅಧಿಕಾರಿಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಗೃಹ ವ್ಯವಹಾರಗಳ ಇಲಾಖೆಯು ಸಿಬ್ಬಂದಿ ಇಲಾಖೆಗೆ ನೀಡಿದ ಮಾಹಿತಿಯ ಪ್ರಕಾರ, ನರೇಶ್ ಅರೋರಾ, ಆಗಿನ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), ಜಿ.ನಾಗೇಶ್ವರ ರಾವ್, ಆಗಿನ ಸೈಬರ್ ಕ್ರೈಮ್ ಎಡಿಜಿಪಿ, ಮುಖವಿಂದರ್ ಸಿಂಗ್ ಛಿನಾ, ಪಟಿಯಾಲ ರೇಂಜ್ನ ಐಜಿಪಿ, ಆಗಿನ ಐಜಿ ಕೌಂಟರ್ ಇಂಟೆಲಿಜೆನ್ಸ್ ಮತ್ತು ನೋಡಲ್ ಅಧಿಕಾರಿ ರಾಕೇಶ್ ಅಗರವಾಲ್, ಡಿಐಜಿ ಫರೀದ್‌ಕೋಟ್ ಸುರ್ಜೀತ್ ಸಿಂಗ್ ಮತ್ತು ಎಸ್‌ಎಸ್‌ಪಿ ಮೊಗಾ ಚರಂಜಿತ್ ಸಿಂಗ್ ಅವರ ವಿರುದ್ಧ ಸುಪ್ರೀಂಕೋರ್ಟ್ ರಚಿಸಿದ್ದ ತನಿಖಾ ಸಮಿತಿ ವರದಿ ನೀಡಿತ್ತು. ಇದರ ಆಧಾರದ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಕೇಳಿತ್ತು. ಇದನ್ನೇ ಆಧರಿಸಿ ಸಿಎಂ ಕೂಡ ಈ ನಿರ್ಧಾರಕ್ಕೆ ಬಂದಿದ್ದಾರೆ.