ನವದೆಹಲಿ: ನೂತನ ಕೃಷಿ ಕಾನೂನುಗಳು ರೈತರಿಗೆ ಹೊಸ ಹೊಸ ಅವಕಾಶಗಳನ್ನು, ಹೆಚ್ಚಿನ ಹಕ್ಕುಗಳನ್ನು ನೀಡುತ್ತವೆಯೇ ಹೊರತು ಇದು ನಿಮಗೆ ಮಾರಕವಲ್ಲ ಎಂದು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿರುವ ರೈತರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 71ನೇ ಆವೃತ್ತಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿವೆ. ದಶಕಗಳ ಹಿಂದೆ ಅನೇಕ ರಾಜಕೀಯ ಪಕ್ಷಗಳು ಈಡೇರಿಸದ ರೈತರ ಬೇಡಿಕೆಗಳನ್ನು ಈಗ ಈಡೇರಿಸಲಾಗಿದೆ ಎಂದರು.
ಈ ಕಾನೂನಿನ ಪ್ರಕಾರ, ಉತ್ಪನ್ನಗಳನ್ನು ಖರೀದಿಸಿದ ಮೂರು ದಿನಗಳಲ್ಲೇ ರೈತರಿಗೆ ಹಣ ಪಾವತಿಸುವುದು ಕಡ್ಡಾಯವಾಗಿದೆ. ಪಾವತಿ ಮಾಡದಿದ್ದರೆ ರೈತರು ದೂರು ನೀಡಬಹುದು. ಆಯಾ ಪ್ರದೇಶದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ರೈತನ ದೂರನ್ನು ಪರಿಗಣಿಸಿ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಮೋದಿ ಮಾಹಿತಿ ನೀಡಿದರು.
"ಮಹಾರಾಷ್ಟ್ರದ ಧುಲೆ ಜಿಲ್ಲೆಯ ಜಿತೇಂದ್ರ ಭೋಯಿಜಿ ಎಂಬ ರೈತ ಈ ಹೊಸ ಕೃಷಿ ಕಾನೂನುಗಳನ್ನು ಹೇಗೆ ಸದುಪಯೋಗ ಪಡಿಸಿಕೊಂಡಿದ್ದಾರೆಂದು ಕೂಡ ಇದೇ ವೇಳೆ ಪ್ರಧಾನಿ ಮಾಹಿತಿ ನೀಡಿದರು. ಮೆಕ್ಕೆಜೋಳವನ್ನು ಬೆಳೆದಿದ್ದ ಜಿತೇಂದ್ರ ಭೋಯಿಜಿ ಸೂಕ್ತ ಬೆಲೆಗೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ನಿರ್ಧರಿಸಿದರು. 3.32 ಲಕ್ಷ ರೂ.ಗೆ ಮಾರಾಟ ಮಾಡಿದರು. ಮುಂಚಿತವಾಗಿ 25 ಸಾವಿರ ರೂ. ಪಡೆದರು. ಆದರೆ ನಿಗದಿಯಾದ ದಿನದೊಳಗೆ ಬಾಕಿ ಹಣ ಅವರಿಗೆ ಸಿಗಲಿಲ್ಲ. ಹೀಗಾಗಿ ಎಸ್‌ಡಿಎಂಗೆ ದೂರು ಸಲ್ಲಿಸಿ ಕೆಲವೇ ದಿನಗಳಲ್ಲಿ ಬಾಕಿ ಹಣ ಪಡೆದರು ಎಂಬುದನ್ನು ಮೋದಿಯವರು ದೇಶದ ರೈತರಿಗೆ ವಿವರಿಸಿದರು.
ಯುವಜನರು ವಿಶೇಷವಾಗಿ ಕೃಷಿ ಅಧ್ಯಯನ ಮಾಡುತ್ತಿರುವರು ಹತ್ತಿರದ ಹಳ್ಳಿಗಳಿಗೆ ಹೋಗಿ ಆಧುನಿಕ ಕೃಷಿ ಮತ್ತು ನೂತನ ಕೃಷಿ ಸುಧಾರಣೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ. ಹೀಗೆ ಮಾಡುವುದರಿಂದ ದೇಶದಲ್ಲಾಗುತ್ತಿರುವ ದೊಡ್ಡ ಬದಲಾವಣೆಯಲ್ಲಿ ನೀವೂ ಪಾಲುದಾರರಾಗುತ್ತೀರಿ ಎಂದು ಪಿಎಂ ಮನವಿ ಮಾಡಿದರು.