ತಿರುಚಿರಾಪಳ್ಳಿ (ತಮಿಳುನಾಡು): ತಮಿಳುನಾಡಿನಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅಂದಾಜು 20,140 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳು ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ, ತಮಿಳುನಾಡಿನ ರೋಮಾಂಚಕ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ದೇಶ ಹೆಮ್ಮೆಪಡುತ್ತದೆ ಎಂದು ಪ್ರಧಾನಿ ಹೇಳಿದರು. ಈ ಹಿಂದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದ ಅವರು ಮಂಗಳವಾರ ಹಿಂದಿಯಲ್ಲೂ ಮಾತನಾಡಿದರು.
ರಾಜ್ಯದ ರಾಜಧಾನಿ ಚೆನ್ನೈನಿಂದ 300 ಕಿ.ಮೀ ದೂರದಲ್ಲಿರುವ ಈ ಮಧ್ಯ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಿ, ವಾಯು ಮತ್ತು ಬಂದರು, ರೈಲ್ವೆ, ಹೆದ್ದಾರಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪರಮಾಣು ಶಕ್ತಿ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ 20 ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದರು. ಈ ಯೋಜನೆಗಳು ತಮಿಳುನಾಡಿನ ಪ್ರಗತಿಗೆ ವೇಗ ನೀಡುತ್ತವೆ. ಪ್ರಯಾಣದ ಸುಲಭತೆಯನ್ನು ಹೆಚ್ಚಿಸುತ್ತವೆ ಮತ್ತು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ತಿಳಿಸಿದರು.
ದೇಶದ ಅಭಿವೃದ್ಧಿಯಲ್ಲಿ ತಮಿಳುನಾಡಿನಿಂದ ಪಡೆದ ಸಾಂಸ್ಕೃತಿಕ ಸ್ಫೂರ್ತಿಯನ್ನು ಸತತವಾಗಿ ವಿಸ್ತರಿಸುವುದು ನಮ್ಮ ಪ್ರಯತ್ನವಾಗಿದೆ. ದೆಹಲಿಯ ಹೊಸ ಸಂಸತ್ ಕಟ್ಟಡದಲ್ಲಿ 'ಸೆಂಗೋಲ್' ಸ್ಥಾಪಿಸಲಾಗಿದೆ. ಇದು ಇಡೀ ದೇಶಕ್ಕೆ ತಮಿಳು ಸಂಸ್ಕೃತಿ ನೀಡಿದ ಉತ್ತಮ ಆಡಳಿತದ ಮಾದರಿಯಿಂದ ಪ್ರೇರಿತವಾಗಿದೆ ಎಂದು ಮೋದಿ ಬಣ್ಣಿಸಿದರು. ಮುಂದಿನ 25 ವರ್ಷಗಳ ಕಾಲ 'ಆಜಾದಿ ಕಾ ಅಮೃತ್ ಕಾಲ್' ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದರು.
ವರ್ಷದಲ್ಲಿ 40 ಕೇಂದ್ರ ಸಚಿವರಿಂದ 400 ಬಾರಿ ರಾಜ್ಯ ಪ್ರವಾಸ: ಇದೇ ವೇಳೆ, ಕಳೆದ ತಿಂಗಳು ರಾಜ್ಯದಲ್ಲಿ ಸಂಭವಿಸಿದ ಮಳೆ, ಪ್ರವಾಹ ಮತ್ತು ಅದರ ಪರಿಣಾಮದಿಂದ ಉಂಟಾದ ನಷ್ಟವನ್ನು ಉಲ್ಲೇಖಿಸಿದ ಅವರು, ಸಂತ್ರಸ್ತ ಕುಟುಂಬಗಳ ಸ್ಥಿತಿ ಕಂಡು ತಾವು ತೀವ್ರವಾಗಿ ನೊಂದಿದ್ದೇವೆ. ಕೇಂದ್ರ ಸರ್ಕಾರವು ಈ ಬಿಕ್ಕಟ್ಟಿನ ಸಮಯದಲ್ಲಿ ತಮಿಳುನಾಡಿನ ಜನರೊಂದಿಗೆ ನಿಂತಿದೆ. ನಾವು ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದ್ದೇವೆ. ಕಳೆದ ವರ್ಷದಲ್ಲಿ 40ಕ್ಕೂ ಹೆಚ್ಚು ಕೇಂದ್ರ ಸಚಿವರು ತಮಿಳುನಾಡಿಗೆ 400ಕ್ಕೂ ಹೆಚ್ಚು ಬಾರಿ ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡಿನ ಪ್ರಗತಿಯೊಂದಿಗೆ ಭಾರತವು ಪ್ರಗತಿ ಹೊಂದುತ್ತದೆ ಎಂದು ಹೇಳಿದರು.
ಇತ್ತೀಚೆಗೆ ನಿಧನರಾದ ಡಿಎಂಡಿಕೆ ನಾಯಕ ವಿಜಯಕಾಂತ್ ಅವರನ್ನೂ ತಮ್ಮ ಭಾಷಣದಲ್ಲಿ ಸ್ಮರಿಸಿದ ಮೋದಿ, ಚಿತ್ರರಂಗ ಮತ್ತು ರಾಜಕೀಯ ಎರಡರಲ್ಲೂ ವಿಜಯಕಾಂತ್ 'ಕ್ಯಾಪ್ಟನ್' ಆಗಿದ್ದರು. ರಾಜಕೀಯದಲ್ಲಿ ವಿಜಯಕಾಂತ್ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿ ಹೊಂದಿದ್ದರು ಎಂದರು. ಅಲ್ಲದೇ, ಇತ್ತೀಚೆಗೆ ನಿಧನರಾದ ತಮಿಳುನಾಡಿನ ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರನ್ನೂ ಸ್ಮರಿಸಿದರು.
ನೈಸರ್ಗಿಕ ವಿಕೋಪ ಎಂದು ಘೋಷಿಸಿ-ಸಿಎಂ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, ಚೆನ್ನೈ ಮತ್ತು ದಕ್ಷಿಣ ತಮಿಳುನಾಡಿನಲ್ಲಿ ಉಂಟಾದ ಮಳೆ, ಪ್ರವಾಹ ಮತ್ತು ಪರಿಣಾಮವಾಗಿ ಹಾನಿ ಮತ್ತು ಜೀವಹಾನಿಯ ಹಿನ್ನೆಲೆಯಲ್ಲಿ ಇದನ್ನು 'ತೀವ್ರ ನೈಸರ್ಗಿಕ ವಿಕೋಪ' ಎಂದು ಘೋಷಿಸಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ರಾಜ್ಯಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಜನರಿಗೆ ಹತ್ತಿರವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ, ಆರೋಗ್ಯ ಸೌಲಭ್ಯಗಳು ಮತ್ತು ಜನರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುವ ಕರ್ತವ್ಯವನ್ನು ಹೊಂದಿದೆ ಎಂದು ಸ್ಟಾಲಿನ್ ಹೇಳಿದರು.
ಇದನ್ನೂ ಓದಿ:ಇಂದಿನಿಂದ 2 ದಿನ ಮೋದಿ ದಕ್ಷಿಣ ಭಾರತ ಪ್ರವಾಸ: ಕೇರಳ, ತಮಿಳುನಾಡು, ಲಕ್ಷದ್ವೀಪಕ್ಕೆ ಭೇಟಿ