ನವದೆಹಲಿ:ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ದಾಖಲೆ ಮಟ್ಟದಲ್ಲಿ ಏರಿಕೆ ಆಗುತ್ತಿರುವ ಮಧ್ಯೆ, ದೇಶಾದ್ಯಂತ ವೈದ್ಯಕೀಯ ಬಳಿಕೆಯ ಆಮ್ಲಜನಕದ ಸಮರ್ಪಕ ಪೂರೈಕೆ ತಿಳಿದುಕೊಳ್ಳು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಜತೆ ಚರ್ಚಿಸಿ ಪರಿಶೀಲನೆ ನಡೆಸಿದ್ದಾರೆ.
ಆರೋಗ್ಯ, ಡಿಪಿಐಐಟಿ, ಸ್ಟೀಲ್ ಮತ್ತು ರಸ್ತೆ ಸಾರಿಗೆ ಸೇರಿದಂತೆ ವಿವಿಧ ಸಚಿವಾಲಯಗಳ ಬಗ್ಗೆ ಪ್ರಧಾನಮಂತ್ರಿಯೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಾದ್ಯಂತ ಸಿನರ್ಜಿಯ ಮಹತ್ವ ಒತ್ತಿ ಹೇಳಲಾಗಿದೆ ಎಂದು ಪ್ರಧಾನಿ ಕಚೇರಿಯ (ಪಿಎಂಒ) ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಮುಂದಿನ 15 ದಿನಗಳಲ್ಲಿ ಆಮ್ಲಜನಕ ಪೂರೈಕೆ ಮತ್ತು ಈಗಿನ ಯೋಜಿತ ಬಳಕೆಯ ಬಗ್ಗೆ ಪಿಎಂ ಮೋದಿ ವಿವರವಾದ ಪರಿಶೀಲನೆ ನಡೆಸಿದರು.
ಈ 12 ರಾಜ್ಯಗಳಿಗೆ ಕ್ರಮವಾಗಿ ಏಪ್ರಿಲ್ 20, 25 ಮತ್ತು 30ರವರೆಗೆ ತಮ್ಮ ಯೋಜಿತ ಬೇಡಿಕೆ ಪೂರೈಸಲು 4,880 ಮೆ.ಟನ್, 5,619 ಮೆ.ಟನ್ ಮತ್ತು 6,593 ಮೆ.ಟನ್ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ದೇಶದ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಪ್ರಧಾನಿಗೆ ವಿವರಿಸಲಾಯಿತು. ಉಕ್ಕಿನ ಸ್ಥಾವರಗಳಲ್ಲಿ ಆಮ್ಲಜನಕದ ಪೂರೈಕೆಯ ಹೆಚ್ಚುವರಿ ದಾಸ್ತಾನುಗಳನ್ನು ವೈದ್ಯಕೀಯ ಬಳಕೆಗಾಗಿ ನೀಡಲಾಗುವುದು ಎಂದು ಚರ್ಚಿಸಲಾಯಿತು.
ದೇಶಾದ್ಯಂತ ಆಮ್ಲಜನಕವನ್ನು ಸಾಗಿಸುವ ಟ್ಯಾಂಕರ್ಗಳ ತಡೆರಹಿತ ಮತ್ತು ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರ ಎಲ್ಲ ಅಂತಾರಾಜ್ಯ ಚಲನೆಯ ಪರವಾನಗಿ ನೋಂದಣಿಯಿಂದಲೂ ವಿನಾಯಿತಿ ನೀಡಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಾಮರ್ಥ್ಯ ಹೆಚ್ಚಳವನ್ನು ಖಚಿತಪಡಿಸಿಕೊಳ್ಳಲು ಟ್ಯಾಂಕರ್ ಗಳು ದಿನ ಪೂರ್ತಿ ಸಂಚರಿಸಬೇಕು.
ಚಾಲಕರು ಶಿಪ್ಟ್ ಗಳಲ್ಲಿ ಕೆಲಸ ಮಾಡುವಂತೆ ಎಲ್ಲ ರಾಜ್ಯಗಳು ಮತ್ತು ಸಾರಿಗೆ ವಲಯಕ್ಕೆ ಸೂಚಿಸಲಾಗಿದೆ ಎಂದು ಸಭೆಯಲ್ಲಿ ಪ್ರಧಾನಮಂತ್ರಿ ಅವರಿಗೆ ತಿಳಿಸಲಾಗಿದೆ. ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಸಿಲಿಂಡರ್ ರೀಫಿಲ್ ಮಾಡುವ ಘಟಕಗಳು ಸಹ 24 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಕೈಗಾರಿಕಾ ಸಿಲಿಂಡರ್ ಗಳನ್ನು ಶುದ್ದೀಕರಿಸಿದ ನಂತರ ವೈದ್ಯಕೀಯ ವಲಯದ ಆಮ್ಲಜನಕಕ್ಕೆ ಬಳಕೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಇದೇ ಸಂದರ್ಭದಲ್ಲಿ ಟ್ಯಾಂಕರ್ ಗಳ ಸಂಭವನೀಯ ಕೊರತೆ ನೀಗಿಸಲು ನೈಟ್ರೋಜೆನ್ ಮತ್ತು ಆರ್ಗಾನ್ ಟ್ಯಾಂಕರ್ ಗಳನ್ನು ಸ್ವಯಂಚಾಲಿತವಾಗಿ ಆಮ್ಲಜನಕ ಟ್ಯಾಂಕರ್ ಗಳನ್ನಾಗಿ ಪರಿವರ್ತಿಸಲು ಅನುಮತಿ ನೀಡಲಾಗಿದೆ.