ನವದೆಹಲಿ: ಪ್ರತೀ ವರ್ಷ ಪ್ರಧಾನಿ ಕಚೇರಿಯಿಂದ (PMO) ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಾಗುತ್ತದೆ. ಈ ರಿಪೋರ್ಟ್ ಕಾರ್ಡ್ನಲ್ಲಿ ಇಲಾಖೆಗಳು ಮತ್ತು ಸಚಿವರಿಗೆ ರ‍್ಯಾಂಕಿಂಗ್ ನೀಡಲಾಗುತ್ತದೆ. ಈಗ ಎಲ್ಲಾ ಇಲಾಖೆಗಳ ರ‍್ಯಾಂಕಿಂಗ್ ಪಟ್ಟಿ ಸಿದ್ಧವಾಗಿದ್ದು, ಸಂಪುಟ ಪುನರ್ರಚನೆಗೆ ಕಾಲ ಕೂಡಿ ಬಂದಿದೆ ಎಂಬ ಮಾಹಿತಿ ದೊರೆತಿದೆ.
ಮೂಲಗಳ ಪ್ರಕಾರ, ಈ ಬಾರಿ ಸ್ವತಃ ಪ್ರಧಾನಿ ಮೋದಿಯವರೇ ಎಲ್ಲಾ ಇಲಾಖೆಗಳ ಪರಿಶೀಲನೆ ಮಾಡಿದ್ದು, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಧಾನಿಗೆ ಈ ಟಾಸ್ಕ್ನಲ್ಲಿ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.
ಮುಂಬರುವ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ವಿಸ್ತರಣೆ ಅಥವಾ ಪುನರ್ರಚನೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರ್ಕಾರದ ಎರಡನೇ ಅವಧಿಯ ಸಂಪುಟದ ಪುನರ್ರಚನೆಯ ಸಾಧ್ಯತೆಗಳೂ ದಟ್ಟವಾಗಿವೆ.
ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಕಲ್ಲಿದ್ದಲು ಮತ್ತು ಗಣಿಗಾರಿಕೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳು, ನಾಗರಿಕ ವಿಮಾನಯಾನ, ರೈಲ್ವೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ, ಬುಡಕಟ್ಟು ವ್ಯವಹಾರ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಕೌಶಲ್ಯ ಅಭಿವೃದ್ಧಿ ಮತ್ತು ಈಶಾನ್ಯ ಪ್ರದೇಶದ ಉದ್ಯಮಶೀಲತೆ ಮತ್ತು ಅಭಿವೃದ್ಧಿ ಇಲಾಖೆಗಳನ್ನು ವಿಮರ್ಶೆ ಮಾಡಲಾಗಿದೆ.
ಈ ವಿಮರ್ಶೆಗಳ ಆಧಾರದ ಮೇಲೆ ರ‍್ಯಾಂಕಿಂಗ್ ನೀಡಲಾಗಿದ್ದು, ಇದು ಸಂಪುಟ ವಿಸ್ತರಣೆ ಅಥವಾ ಪುನರ್ರಚನೆಯ ಮೇಲೆಯೂ ಪರಿಣಾಮ ಬೀರಲಿದೆ. 2019ರಿಂದ ಕ್ಯಾಬಿನೆಟ್ನಲ್ಲಿ ಯಾವುದೇ ಬದಲಾವಣೆ ತಂದಿಲ್ಲದೇ ಇರುವುದೂ ಕೂಡಾ ಈಗ ಕ್ಯಾಬಿನೆಟ್ ವಿಸ್ತರಣೆ ಮತ್ತು ಪುನರ್ರಚನೆ ವಿಚಾರದಲ್ಲಿ ಮತ್ತಷ್ಟು ಪುಷ್ಟಿ ನೀಡುತ್ತದೆ.