ಕರ್ನಾಟಕ

karnataka

ETV Bharat / bharat

ಅಮೆರಿಕ, ಈಜಿಪ್ಟ್ ಪ್ರವಾಸದ ನಂತರ ಭಾರತಕ್ಕೆ ವಾಪಸ್​​ ಆದ ಪ್ರಧಾನಿ ಮೋದಿ - ಪ್ರಧಾನಿ ನರೇಂದ್ರ ಮೋದಿ

ಅಮೆರಿಕ ಹಾಗೂ ಈಜಿಪ್ಟ್ ಪ್ರವಾಸ ಮುಗಿಸಿ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಪಕ್ಷದ ಸಂಸದರು ಸ್ವಾಗತಿಸಿದರು.

PM Modi returns to India
ಭಾರತಕ್ಕೆ ಮರಳಿದ ಪ್ರಧಾನಿ ಮೋದಿ

By

Published : Jun 26, 2023, 7:12 AM IST

ನವದೆಹಲಿ:ಆರು ದಿನಗಳ ಅವಧಿಯ ಯುನೈಟೆಡ್ ಸ್ಟೇಟ್ಸ್ ಮತ್ತು ಆ ಬಳಿಕ ಈಜಿಪ್ಟ್‌ಗೆ ತಮ್ಮ ಚೊಚ್ಚಲ ಭೇಟಿ ಪೂರ್ಣಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ದೆಹಲಿಗೆ ಆಗಮಿಸಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ರಾಜ್ಯ ಸಚಿವ ಮೀನಾಕಾಶಿ ಲೇಖಿ, ಹನ್ಸ್ ರಾಜ್ ಹನ್ಸ್ ಮತ್ತು ಗೌತಮ್ ಗಂಭೀರ್ ಸೇರಿದಂತೆ ಪಕ್ಷದ ಸಂಸದರು ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು.

ಇಂದು ಮುಂಜಾನೆ ಪಿಎಂ ಮೋದಿ ಅವರು, ಈಜಿಪ್ಟ್‌ಗೆ ತಮ್ಮ ಮೊದಲ ಭೇಟಿಯ ನೋಟವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಈಜಿಪ್ಟ್ ಭೇಟಿ ಐತಿಹಾಸಿಕವಾದದ್ದು, ಇದು ಭಾರತ- ಈಜಿಪ್ಟ್ ಸಂಬಂಧಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಅದು ಉಭಯ ರಾಷ್ಟ್ರಗಳ ಜನರಿಗೆ ಪ್ರಯೋಜನ ನೀಡುತ್ತದೆ. ಸರ್ಕಾರ ಮತ್ತು ಈಜಿಪ್ಟ್ ಜನರ ಪ್ರೀತಿಗೆ ನಾನು ಋಣಿ. ಅಧ್ಯಕ್ಷರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

ಅರಬ್ ದೇಶದ ಅತ್ಯುನ್ನತ ಗೌರವ ಪ್ರದಾನ: ಇದಕ್ಕೂ ಮುನ್ನ ಈಜಿಪ್ಟ್​ ಅಧ್ಯಕ್ಷ ಎಲ್-ಸಿಸಿ ಅವರು ಮೋದಿಗೆ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ 'ಆರ್ಡರ್ ಆಫ್ ದಿ ನೈಲ್' ಪ್ರಶಸ್ತಿ ನೀಡಿದರು. ಇದು ಪ್ರಧಾನಿ ಮೋದಿ ಅವರಿಗೆ ಸಂದ 13ನೇ ಅತ್ಯುನ್ನತ ರಾಜ್ಯ ಗೌರವವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ 'ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗೊಹು, ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ' ಪ್ರಶಸ್ತಿ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿಗೆ ಈಜಿಪ್ಟ್‌ನ ಅತ್ಯುನ್ನತ 'ಆರ್ಡರ್ ಆಫ್ ದಿ ನೈಲ್' ಪ್ರಶಸ್ತಿ ಪ್ರದಾನ

ಹಲವು ಮಹತ್ವದ ಒಪ್ಪಂದಗಳಿಗೆ ಸಹಿ:ಭಾನುವಾರ ಪ್ರಧಾನಿ ಮೋದಿ ಅವರು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ ಸಂಬಂಧಗಳ ಕಾರ್ಯತಂತ್ರದ ಸಹಭಾಗಿತ್ವ ಹೆಚ್ಚಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ನವೀಕರಿಸಬಹುದಾದ ಇಂಧನ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

ಈಜಿಪ್ಟ್‌ನಲ್ಲಿ ಪ್ರಧಾನಿ ಮೋದಿ ಕೈರೋದಲ್ಲಿನ ಗಿಜಾದ ಪಿರಮಿಡ್‌ಗಳು ಮತ್ತು ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದರು. ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ಹೆಲಿಯೊಪೊಲಿಸ್ ಯುದ್ಧದ ಸ್ಮಶಾನಕ್ಕೆ ತೆರಳಿ ಮೊದಲ ಮಹಾಯುದ್ಧದ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಶನಿವಾರ ಪಿಎಂ ಮೋದಿ ಅವರು ತಮ್ಮ ಈಜಿಪ್ಟ್ ಸಹವರ್ತಿ ಮೊಸ್ತಫಾ ಮಡ್ಬೌಲಿ ಅವರೊಂದಿಗೆ ಕೈರೋದಲ್ಲಿ ದುಂಡು ಮೇಜಿನ ಸಭೆ ನಡೆಸಿದರು. ಅರಬ್ ರಾಷ್ಟ್ರಕ್ಕೆ ತನ್ನ ಎರಡು ದಿನಗಳ ಭೇಟಿಯ ಭಾಗವಾಗಿ ಅವರು ಈಜಿಪ್ಟ್‌ನಲ್ಲಿ ಗ್ರ್ಯಾಂಡ್ ಮುಫ್ತಿಯನ್ನು ಭೇಟಿಯಾದರು.

ಇದನ್ನೂ ಓದಿ:PM Modi in Egypt: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಪಿರಮಿಡ್‌ ವೀಕ್ಷಿಸಿದ ಪ್ರಧಾನಿ ಮೋದಿ - ವಿಡಿಯೋ

ಆರು ದಿನಗಳ ಅವಧಿಯ ಪ್ರವಾಸ: ಪ್ರಧಾನಿ ಮೋದಿ ಜೂ.24-25 ರವರೆಗೆ ಈಜಿಪ್ಟ್‌ ಪ್ರವಾಸದಲ್ಲಿದ್ದರು. ಇದಕ್ಕೂ ಮೊದಲು ಅವರು ಜೂ.20 ರಂದು ಅಮೆರಿಕ ಪ್ರವಾಸವನ್ನು ಪ್ರಾರಂಭಿಸಿದ್ದರು. ಜೂ.21 ರಂದು ಯುಎನ್ ಪ್ರಧಾನ ಕಚೇರಿ ನ್ಯೂಯಾರ್ಕ್‌ನಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನದ ಸ್ಮರಣಾರ್ಥ ಐತಿಹಾಸಿಕ ಕಾರ್ಯಕ್ರಮ ನಡೆಸಿದರು. ನಂತರ ವಾಷಿಂಗ್ಟನ್ ಡಿಸಿಯಲ್ಲಿ ಅಧ್ಯಕ್ಷ ಬೈಡನ್ ಅವರು ಶ್ವೇತಭವನದಲ್ಲಿ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದರು. ಉಭಯ ನಾಯಕರು ಗುರುವಾರ ಐತಿಹಾಸಿಕ ಶೃಂಗಸಭೆ ಕೂಡಾ ನಡೆಸಿದರು.

ಅಮೆರಿಕದ ಪ್ರವಾಸದಲ್ಲಿ ಮೋದಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಸೇರಿದಂತೆ ಪ್ರಮುಖ ಅಮೆರಿಕನ್ ಮತ್ತು ಭಾರತೀಯ ಸಿಇಒಗಳನ್ನು ಭೇಟಿಯಾದರು. ಪ್ರಧಾನಿ ಮೋದಿ ಅವರಿಗೆ ಬೈಡನ್​ ದಂಪತಿ ಶ್ವೇತಭವನದಲ್ಲಿ ಭೋಜನ ಕೂಟ ಏರ್ಪಡಿಸಿದ್ದರು. ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಹಲವು ಗಣ್ಯರು ಈ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ಜೂ.22 ರಂದು ಪಿಎಂ ಮೋದಿ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಆ ಮೂಲಕ ಕಾಂಗ್ರೆಸ್‌ ಜಂಟಿ ಅಧಿವೇಶನದಲ್ಲಿ ಎರಡು ಬಾರಿ ಭಾಷಣ ಮಾಡಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2016ರಲ್ಲಿ ಅಮೆರಿಕ ಕಾಂಗ್ರೆಸ್‌ನ ಜಂಟಿ ಸಭೆಯನ್ನುದ್ದೇಶಿಸಿ ಅವರು ಮೊದಲ ಭಾಷಣ ಮಾಡಿದ್ದರು. ಈ ಭೇಟಿಯು ರಕ್ಷಣೆ, ಬಾಹ್ಯಾಕಾಶ ಮತ್ತು ವ್ಯಾಪಾರದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಹಲವಾರು ಪ್ರಮುಖ ಒಪ್ಪಂದಗಳಿಂದ ಗುರುತಿಸಲ್ಪಟ್ಟಿದೆ. ಅಮೆರಿಕಕ್ಕೆ ತಮ್ಮ ಉನ್ನತ ಮಟ್ಟದ ರಾಜ್ಯ ಭೇಟಿಯನ್ನು ಮುಗಿಸಿದ ನಂತರ ಮೋದಿ ಶನಿವಾರ ಕೈರೋಗೆ ತೆರಳಿದ್ದರು. ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರು ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡಿದ್ದರು.

ಇದನ್ನೂ ಓದಿ:ಶ್ವೇತಭವನದಲ್ಲಿ ಪ್ರಧಾನಿ ಮೋದಿ: ಬೈಡನ್‌ ದಂಪತಿಯಿಂದ ಆತ್ಮೀಯ ಸ್ವಾಗತ

ಭಾರತದಲ್ಲಿ ಏನಾಗುತ್ತಿದೆ?:ವಿದೇಶ ಪ್ರವಾಸದಿಂದ ಭಾರತಕ್ಕೆ ಮರಳಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ನಾಯಕರನ್ನು ಭಾರತದಲ್ಲಿ ಏನಾಗುತ್ತಿದೆ ಎಂದು ಕೇಳಿದರು ಎಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಳ್ಳಲು ತೆರಳಿದ್ದ ಪಕ್ಷದ ಮುಖಂಡರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಡ್ಡಾ "ತಮ್ಮ ಒಂಬತ್ತು ವರ್ಷಗಳ ಸರ್ಕಾರದ ವರದಿ ಕಾರ್ಡ್‌ನೊಂದಿಗೆ ಪಕ್ಷದ ನಾಯಕರು ಜನರನ್ನು ತಲುಪುತ್ತಿದ್ದಾರೆ ಮತ್ತು ದೇಶವು ಸಂತೋಷವಾಗಿದೆ ಎಂದು ಹೇಳಿದರು" ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಸುದ್ದಿಗಾರರಿಗೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ "ದೇಶದಲ್ಲಿ ಏನಾಗುತ್ತಿದೆ ಮತ್ತು ಪಕ್ಷದ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಹೇಗೆ ನಡೆಯುತ್ತಿದೆ ಎಂದು ಪ್ರಧಾನಿ ಕೇಳಿದರು. ನಾವು ಈ ಬಗ್ಗೆ ಅವರಿಗೆ ತಿಳಿಸಿದ್ದೇವೆ" ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಈಜಿಪ್ಟ್‌ಗೆ ತಮ್ಮ ಮೊದಲ ಪ್ರವಾಸವನ್ನು ಮುಗಿಸಿದ ನಂತರ ಭಾರತಕ್ಕೆ ಮರಳಿದ್ದಾರೆ. ಅಧ್ಯಕ್ಷ ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಜೂ.20ರಂದು ಅಮೆರಿಕಕ್ಕೆ ತೆರಳಿದ್ದರು.

ಇದನ್ನೂ ಓದಿ:ಭಾರತೀಯ ಮಕ್ಕಳು ಸ್ಪೈಡರ್​ಮ್ಯಾನ್​ ವೇಷ ಧರಿಸಿದ್ರೆ, ಅಮೆರಿಕ ಯುವಕರು ನಾಟುನಾಟು ಹಾಡಿಗೆ ಹೆಜ್ಜೆ ಹಾಕುತ್ತಾರೆ: ಪ್ರಧಾನಿ ಮೋದಿ

ABOUT THE AUTHOR

...view details