ನವದೆಹಲಿ:ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದ್ದು, ಈ ವೇಳೆ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಮುಂದಿನ 100 ವರ್ಷಗಳ ಕಾಲ ಅಧಿಕಾರಲ್ಲ ಬರಲ್ಲ ಎಂದರು.
ಈಗಾಗಲೇ ಅನೇಕ ಚುನಾವಣೆಗಳಲ್ಲಿ ಅವರು ಸೋಲು ಕಂಡಿದ್ದರೂ ಕೂಡ ದುರಹಂಕಾರದಿಂದ ಹೊರಬಂದಿಲ್ಲ. ವಾಸ್ತವದೊಂದಿಗೆ ಸಂಪರ್ಕ ಕಂಡಿದುಕೊಂಡಿರುವ ಕಾಂಗ್ರೆಸ್, ಮುಂದಿನ ಚುನಾವಣೆ ಮಾತ್ರವಲ್ಲ, 100 ವರ್ಷಗಳ ಕಾಲ ದೇಶದ ಜನರು ಈ ಪಕ್ಷವನ್ನ ಅಧಿಕಾರದಿಂದ ದೂರ ಇಡಲು ನಿರ್ಧರಿಸಿದ್ದಾರೆ ಎಂದರು.
ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಕಾಂಗ್ರೆಸ್ ತುಕ್ಡೆ, ತುಕ್ಡೆ ಗ್ಯಾಂಗ್ನ ನಾಯಕ ಎಂದ ಪ್ರಧಾನಿ ನರೇಂದ್ರ ಮೋದಿ, ಈ ಪಕ್ಷ ಒಡೆದು ಆಳುವ ನೀತಿ ಹೊಂದಿದೆ. ಆ ಪಕ್ಷದಲ್ಲಿ ನಾಯಕರು ಹೇಳಿಕೆ, ನಡುವಳಿಕೆ ನೋಡಿದರೆ ಅದಕ್ಕೆ ಅಧಿಕಾರದ ಹಸಿವಿಲ್ಲ ಎಂಬುದು ಗೊತ್ತಾಗುತ್ತದೆ. ಅದೇ ಕಾರಣಕ್ಕಾಗಿ ಪ್ರತ್ಯೇಕವಾದಿಗಳ ಗುಂಪು ಬಲಪಡಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಇದೇ ವೇಳೆ ಕಾಂಗ್ರೆಸ್ನ ಅದೀರ್ ರಂಜನ್ ಚೌಧರಿ ವಿರುದ್ಧ ವ್ಯಂಗ್ಯವಾಡಿ,ರಂಜನ್ ಚೌಧರಿಗೆ ಬಾಲ್ಯವನ್ನು ಆನಂದಿಸಲು ಅವಕಾಶ ನೀಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ನಾವು ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದೇವೆ ಎಂದ ನಮೋ, ಆತ್ಮನಿರ್ಭರ ಭಾರತಕ್ಕೆ ಕಾಂಗ್ರೆಸ್ ಅಡ್ಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಪ್ರಜಾಪ್ರಭುತ್ವಕ್ಕೆ ಬದ್ಧರಾಗಿದ್ದೇವೆ ಎಂದಿರುವ ನಮೋ, ಟೀಕೆ ಮಾಡುವುದು ಪ್ರಜಾಪ್ರಭುತ್ವದ ಅಂಗಗಳಲ್ಲಿ ಒಂದಾಗಿದೆ. ಆದರೆ, ಕುರುಡು ಪ್ರತಿಭಟನೆ, ಸಾರ್ವಜನಿಕ ವ್ಯವಸ್ಥೆಗೆ ಅಗೌರವ ಸರಿಯಲ್ಲ. ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವೇ ಮಹಾಮಾರಿ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹದ್ದು ಮೀರಿ ವರ್ತಿಸಿದೆ.
ಇದನ್ನೂ ಓದಿರಿ:ಪಿಎಂ ಕೇರ್ಸ್ ಫಂಡ್ನಲ್ಲಿ ₹10,990 ಕೋಟಿ ಸಂಗ್ರಹ... ಬಳಕೆಯಾಗಿದ್ದು ಮಾತ್ರ ₹3,976 ಕೋಟಿ!
ಕೊರೊನಾ ಸಂದರ್ಭದಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ತಿಳಿಸಲಾಯಿತು. ಕಾಂಗ್ರೆಸ್ ಇದನ್ನ ವಿರೋಧಿಸಿದೆ. ಇದರ ಜೊತೆಗೆ ಫಿಟ್ ಇಂಡಿಯಾ ಆಂದೋಲನಕ್ಕೂ ನಿಮ್ಮ ವಿರೋಧ ವ್ಯಕ್ತವಾಯಿತು. ಕೋವಿಡ್ ಸಂಕಷ್ಟದಲ್ಲೂ ನಾವು ಹಣದುಬ್ಬರ ನಿಯಂತ್ರಣ ಮಾಡಿದ್ದೇವೆ. ದೇಶದ ಉದ್ಯಮಿಗಳು ವೈರಸ್ಗಳು ಎಂದು ಕಾಂಗ್ರೆಸ್ ಪಕ್ಷ ಹೇಳುತ್ತದೆ. ಬರುವ ದಿನಗಳಲ್ಲಿ ನೀವೂ ಪಾಠ ಕಲಿಯದಿದ್ದರೆ, ಇತಿಹಾಸದಿಂದಲೇ ಕಳೆದು ಹೋಗುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಈಗಾಗಲೇ ಅನೇಕ ವಲಯಗಳಲ್ಲಿ ಅಭಿವೃದ್ಧಿ ಸಾಧಿಸಿದ್ದೇವೆ. ಬಡವರ ಮನೆಗಳಲ್ಲಿ ವಿದ್ಯುತ್, ಕುಡಿಯುವ ನೀರು ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದೆ ಇದರ ಬಗ್ಗೆ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ. 50 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿರುವ ನೀವೂ ಬಡವರಿಗೋಸ್ಕರ ಏನು ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದರು.