ನವದೆಹಲಿ: ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಪಟ್ಟ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು 76 ಶೇಕಡಾ ಮತಗಳನ್ನು ಪಡೆಯುವ ಮೂಲಕ ವಿಶ್ವ ನಾಯಕರಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ಅಮೆರಿಕ ಮೂಲದ ಕನ್ಸಲ್ಟೆನ್ಸಿ ಸಂಸ್ಥೆ 'ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ಪ್ರಕಾರ ಭಾರತದಲ್ಲಿ ಶೇಕಡಾ 76 ರಷ್ಟು ಜನರು ಪ್ರಧಾನಿ ಮೋದಿಯವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಶೇಕಡಾ 18 ರಷ್ಟು ಜನರು ಮೋದಿ ಅವರ ಬಗ್ಗೆ ಒಲವು ತೋರಿಸಿಲ್ಲ. ಇನ್ನು ಶೇ ಆರಷ್ಟು ಜನ ಯಾವುದೇ ಅಭಿಪ್ರಾಯವನ್ನು ನೀಡಲು ನಿರಾಕರಿಸಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ, 9.5 ವರ್ಷಗಳ ಆಡಳಿತದ ಬಳಿಕವೂ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಅವರಿಗೆ ಬಂದ ಮತಗಳೇ ಇದಕ್ಕೆ ಸಾಕ್ಷಿ. ಎರಡನೇ ಅತ್ಯುತ್ತಮ ಅನುಮೋದನೆಯ ರೇಟಿಂಗ್ ಪಡೆದುಕೊಂಡಿರುವುದು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್. ಇವರನ್ನು ಶೇ 66 ರಷ್ಟು ಮಂದಿ ಅನುಮೋದಿಸಿದ್ದಾರೆ. ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಶೇ 58 ರಷ್ಟು ಮಂದಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಇವರು ಮೂರನೇ ಸ್ಥಾನದಲ್ಲಿದ್ದಾರೆ.
ಹಿಂದಿನ ಸಮೀಕ್ಷೆಗಳಲ್ಲೂ ಪ್ರಧಾನಿ ಮೋದಿ ಜಾಗತಿಕ ರೇಟಿಂಗ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರು. ಮೋದಿ ಜನಪ್ರಿಯತೆ ರೇಟಿಂಗ್ ಏರಿಕೆ ಕಾಣುತ್ತಿದ್ದರೆ, ಇತರ ದೊಡ್ಡ ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ಗಳು ಸಾಧಾರಣ ಮಟ್ಟದಲ್ಲಿರುವುದು ಗಮನಾರ್ಹ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೇವಲ ಶೇ 37 ರಷ್ಟು ಅನುಮೋದನೆ ಮತಗಳನ್ನು ಪಡೆಯುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ. ಕೆನಡಾದ ಪಿಎಂ ಜಸ್ಟಿನ್ ಟ್ರುಡೊ ಶೇಕಡಾ 31, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ರೇಟಿಂಗ್ ಶೇಕಡಾ 25ರಷ್ಟಿದೆ. ಇನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೇವಲ ಶೇಕಡಾ 24 ರಷ್ಟು ಅನುಮೋದನಾ ಮತಗಳನ್ನು ಪಡೆದುಕೊಂಡಿದ್ದಾರೆ.