ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅಗಲಿಕೆಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಕೊರೊನಾದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಇಂದು ಮೃತಪಟ್ಟಿದ್ದಾರೆ.
ಪಟೇಲ್ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಅಹ್ಮದ್ ಪಟೇಲ್ ಜಿ ಅವರ ನಿಧನದಿಂದ ಬೇಸರವಾಗಿದೆ. ಅವರು ಸಾರ್ವಜನಿಕ ಜೀವನದಲ್ಲಿ ವರ್ಷಗಳನ್ನು ಕಳೆದರು, ಸಮಾಜ ಸೇವೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಅವರ ಪಾತ್ರ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಅವರ ಮಗ ಫೈಸಲ್ ಅವರೊಂದಿಗೆ ಮಾತನಾಡಿ ಸಂತಾಪ ಸೂಚಿಸಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಟ್ವಿಟರ್ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ನಾಯಕನ ಅಗಲಿಕೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದು, ಸಹೋದ್ಯೋಗಿಯಾಗಿದ್ದ ಶ್ರೀಅಹ್ಮದ್ ಪಟೇಲ್ ಅವರನ್ನು ಕಳೆದುಕೊಂಡಿದ್ದೇವೆ. ಅವರು ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ಗಾಗಿ ಸಮರ್ಪಿಸಿದ್ದರು, ನಿಷ್ಠಾವಂತ ಸಹೋದ್ಯೋಗಿ ಹಾಗೂ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬಸ್ಥರ ದುಃಖದಲ್ಲಿ ನಾನೂ ಸಹ ಭಾಗಿಯಾಗಿದ್ದೇನೆ ಎಂದಿದ್ದಾರೆ.