ನವದೆಹಲಿ : ಮಾಜಿ ಪ್ರಧಾನಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ 5ನೇ ವರ್ಷದ ಪುಣ್ಯತಿಥಿ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು. ಜೊತೆಗೆ," ವಾಜಪೇಯಿ ನಾಯಕತ್ವದಿಂದ ಭಾರತಕ್ಕೆ ಹೆಚ್ಚಿನ ಲಾಭವಾಗಿದೆ, ಅವರ ನಾಯಕತ್ವದಲ್ಲಿ ದೇಶವು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿತ್ತು" ಎಂದು ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, "ವಾಜಪೇಯಿ ಅವರ ನಾಯಕತ್ವದಿಂದ ದೇಶವು ಹೆಚ್ಚು ಪ್ರಯೋಜನ ಪಡೆದಿದೆ. ಅವರ ಪುಣ್ಯ ತಿಥಿಯಾದ ಇಂದು ಭಾರತ ದೇಶದ 140 ಕೋಟಿ ಜನರ ಪರವಾಗಿ ಧೀಮಂತ ನಾಯಕನಿಗೆ ಗೌರವ ಸಲ್ಲಿಸುತ್ತಿದ್ದೇನೆ" ಎಂದಿದ್ದಾರೆ.
ಗಣ್ಯರಿಂದ ಪುಷ್ಪ ನಮನ : ವಾಜಪೇಯಿ ಅವರ ಪುಣ್ಯತಿಥಿಯ ಅಂಗವಾಗಿ 'ಸದೈವ್ ಅಟಲ್' ಸ್ಮಾರಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರೆ ಬಿಜೆಪಿ ನಾಯಕರು ಪುಷ್ಪ ನಮನ ಸಲ್ಲಿಸಿದರು.
ಅಟಲ್ ಬಿಹಾರಿ ವಾಜಪೇಯಿ ಕುರಿತಾದ ಮಾಹಿತಿ :ಡಿಸೆಂಬರ್ 25,1924 ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ದಶಕಗಳ ಕಾಲ ಬಿಜೆಪಿ ಪ್ರಮುಖ ರಾಜಕಾರಣಿಯಾಗಿ ಮತ್ತು ವಿಶ್ವ ಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದರು. ಹಾಗೆಯೇ, ಪೂರ್ಣಾವಧಿಯ ಅಧಿಕಾರವನ್ನು ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿದ್ದರು. ಮೇ 16, 1996 ರಿಂದ ಜೂನ್ 1, 1996 ರವರೆಗೆ ಮತ್ತು 19 ಮಾರ್ಚ್ 1998 ರಿಂದ 22 ಮೇ 2004 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಲೋಕಸಭೆಗೆ 10 ಬಾರಿ ಮತ್ತು ರಾಜ್ಯಸಭೆಗೆ ಎರಡು ಬಾರಿ ಚುನಾಯಿತರಾದ ಅವರು, ಜನರ ಪ್ರೀತಿ, ವಾತ್ಸಲ್ಯ, ನಂಬಿಕೆ ಗಳಿಸಿದ್ದರು. ದೀರ್ಘಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ವಾಜಪೇಯಿ ಆಗಸ್ಟ್ 16, 2018 ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಯಲ್ಲಿ ನಿಧನರಾದರು.
ದೇಶಕ್ಕೆ ವಾಜಪೇಯಿ ನೀಡಿರುವ ಅಸಾಧಾರಣ ಸೇವೆ ಮತ್ತು ಸಾಧನೆಗಳನ್ನು ಗುರುತಿಸಿ 2015 ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ನೀಡಲಾಗಿದೆ. ಇದಕ್ಕೂ ಮುನ್ನ ರಾಷ್ಟ್ರದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಸಹ ಪಡೆದಿದ್ದರು. ಅಷ್ಟೇ ಅಲ್ಲದೆ, 2014 ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಪುರಸ್ಕೃತರ ಅಟಲ್ ಜೀ ಅವರನ್ನು ಗೌರವಿಸುವ ಸಲುವಾಗಿ ಅವರ ಜನ್ಮದಿನವಾದ ಡಿಸೆಂಬರ್ 25 ಅನ್ನು ಪ್ರತಿ ವರ್ಷ ಉತ್ತಮ ಆಡಳಿತದ ದಿನವನ್ನಾಗಿ (ಗುಡ್ ಗವರ್ನೆನ್ಸ್ ಡೇ) ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ :ಮುಂಬೈ ಸಮುದ್ರ ಸೇತುವೆಗೆ ಸಾವರ್ಕರ್, ಹಾರ್ಬರ್ ಮಾರ್ಗಕ್ಕೆ ವಾಜಪೇಯಿ ಹೆಸರಿಡಲು ತೀರ್ಮಾನ