ನವದೆಹಲಿ: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಭೇಟಿ ನೀಡಿ ಇದೀಗ ಪಪುವಾ ನ್ಯೂಗಿನಿಗೆ ಪ್ರಯಾಣಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ರತ್ನ ರಾಜೀವ್ ಗಾಂಧಿ ಅವರ 32 ನೇ ಪುಣ್ಯತಿಥಿಯ ಅಂಗವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿ, "ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ" ಎಂದಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇತರೆ ಗಣ್ಯರು ದೆಹಲಿಯ ವೀರ ಭೂಮಿಯಲ್ಲಿ ಮಾಜಿ ಪ್ರಧಾನಿಗೆ ಪುಷ್ಪ ನಮನ ಸಲ್ಲಿಸಿದರು.
'ಅಪ್ಪಾ ನೀವು ಯಾವತ್ತಿಗೂ ನನಗೆ ಸ್ಪೂರ್ತಿ': ದಿವಂಗತ ರಾಜೀವ್ ಗಾಂಧಿ ಅವರ 32ನೇ ಪುಣ್ಯ ತಿಥಿಯ ಹಿನ್ನೆಲೆಯಲ್ಲಿ ಟ್ವೀಟ್ ಮೂಲಕ ಪುತ್ರ ರಾಹುಲ್ ಗಾಂಧಿ ಭಾವನಾತ್ಮಕವಾಗಿ ಶ್ರದ್ಧಾಂಜಲಿ ಕೋರಿದ್ದಾರೆ. ಅಪ್ಪಾ ನೀವು ಯಾವತ್ತಿಗೂ ನನಗೆ ಸ್ಪೂರ್ತಿಯಾಗಿರುತ್ತೀರಿ. ನನ್ನ ನೆನಪಿನಲ್ಲಿ ಸದಾ ಇರುತ್ತೀರಿ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಜೊತೆಗೆ ವಿಡಿಯೋ ಹಂಚಿಕೊಂಡಿದ್ದಾರೆ.
'ಭಾರತ ಮಾತೆಯ ಶ್ರೇಷ್ಠ ಸುಪುತ್ರ' : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ, ರಾಜೀವ್ ಗಾಂಧಿ ಭಾರತ ಮಾತೆಯ ಶ್ರೇಷ್ಠ ಸುಪುತ್ರ. ಮತದಾನದ ವಯಸ್ಸನ್ನು ಕಡಿಮೆಗೊಳಿಸುವುದು, ಪಂಚಾಯತ್ ರಾಜ್, ಟೆಲಿಕಾಂ ಮತ್ತು ಐಟಿ ಕ್ಷೇತ್ರವನ್ನು ಬಲಪಡಿಸುವುದು ಸೇರಿದಂತೆ 21ನೇ ಶತಮಾನದಲ್ಲಿ ಭಾರತವನ್ನು ಪರಿವರ್ತಿಸಿದರು. ಅವರ ಹುತಾತ್ಮ ದಿನದಂದು ನಮ್ಮ ನಮನಗಳು" ಎಂದಿದ್ದಾರೆ.