ನವದೆಹಲಿ:ಜಮ್ಮು ಕಾಶ್ಮೀರದ ಶ್ರೀನಗರದಲ್ಲಿನ ದಾಲ್ ಸರೋವರದಲ್ಲಿ ಶುಕ್ರವಾರ ನಡೆದ ತ್ರಿವರ್ಣ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಇದೊಂದು "ಅದ್ಭುತ ಸಾಮೂಹಿಕ ಪ್ರಯತ್ನ" ಎಂದು ಬಣ್ಣಿಸಿದ್ದಾರೆ.
ಹರ್ ಘಟರ್ ತಿರಂಗಾ ಅಭಿಯಾನದ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ದಾಲ್ ಸರೋವರದಲ್ಲಿ "ತಿರಂಗ ಶಿಕರ್ ರ‍್ಯಾಲಿ"ಯನ್ನು ಆಯೋಜಿಸಿತ್ತು. ಈ ವಿಡಿಯೋವನ್ನು ಮೋದಿ ಅವರು ತಮ್ಮ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವಸಂತಗಳು ಸಂದಿಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ತ್ರಿವರ್ಣ ಧ್ವಜದ ಹಾರಾಟದ ಅಭಿಯಾನ ನಡೆಸಲಾಗುತ್ತಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಈ ಅಭಿಯಾನಕ್ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಚಾಲನೆ ನೀಡಿದ್ದರು.
ಅಮೃತ ಮಹೋತ್ಸವದ ಶುಭಗಳಿಗೆಗೆ ದೇಶ ಕ್ಷಣಗಣನೆ ಎದುರಿಸುತ್ತಿದ್ದು, ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಜಮ್ಮು ಕಾಶ್ಮೀರದಲ್ಲೂ ಪ್ರತಿಧ್ವನಿಸಿದೆ.
ಕಾಶ್ಮೀರ ಕಣಿವೆಯಾದ್ಯಂತ ವಿವಿಧ ಇಲಾಖೆಗಳು ಮತ್ತು ಶಾಲೆಗಳು ವಿವಿಧ ಚಟುವಟಿಕೆಗಳನ್ನು ನಡೆಸುತ್ತಿವೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಮಹಿಳೆಯರು ಮತ್ತು ಯುವತಿಯರು ಧ್ವಜಧಾರಿಗಳಾಗಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಹತ್ತಿರವಿರುವ ಗ್ರಾಮಗಳ ಮನೆಗಳ ಮೇಲೆ ಧ್ವಜ ಝೇಂಕರಿಸುತ್ತಿದೆ.
ಪುಲ್ವಾಮಾ ಜಿಲ್ಲೆಯ ಕಾಲೇಜೊಂದರಲ್ಲಿ ಅಭಿಯಾನದ ಹಿನ್ನೆಲೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದಕ್ಕೂ ಮೊದಲು ಶ್ರೀನಗರದಲ್ಲಿ 'ದಿ ಗ್ರೇಟ್ ಇಂಡಿಯಾ ರನ್' ಹೆಸರಿನಡಿ ಮ್ಯಾರಾಥಾನ್ ನಡೆಸಲಾಯಿತು. 800 ಕಿಲೋಮೀಟರ್ ಅಂತರ ಇರುವ ಶ್ರೀನಗರದಿಂದ ನವದೆಹಲಿಗೆ ಈ ಮ್ಯಾರಾಥಾನ್ ನಡೆಸಲಾಗುತ್ತಿದೆ.
ಓದಿ:ಸ್ವಾತಂತ್ರ್ಯ ಅಮೃತ ಮಹೋತ್ಸವ: ತಿರಂಗಾ ಹಾರಿಸುವ ಮುನ್ನ, ಹಾರಿಸಿದ ನಂತರ ರಾಷ್ಟ್ರಧ್ವಜದ ಘನತೆ ಬಗ್ಗೆ ಎಚ್ಚರವಿರಲಿ