ಶಿರಡಿ ಸಾಯಿಬಾಬಾಗೆ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ ಅಹ್ಮದ್‌ನಗರ (ಮಹಾರಾಷ್ಟ್ರ):ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಲ್ಲಿನ ಶಿರಡಿ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಾಯಿಬಾಬಾ ಸಮಾಧಿಗೆ ಪ್ರಾರ್ಥನೆ ಸಲ್ಲಿಸಿದರು.
ಶಿರಡಿ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಭಕ್ತರ ಸಾಲು ಹಾದಿಯ ಉದ್ಘಾಟನೆ, ನಿಲವಂದೆ ಅಣೆಕಟ್ಟೆಯಲ್ಲಿ ಜಲಪೂಜೆ ಮತ್ತು ಅಣೆಕಟ್ಟೆಯ ಕಾಲುವೆಯ ಜಾಲದ ಲೋಕಾರ್ಪಣೆ ಸೇರಿದಂತೆ ಆರೋಗ್ಯ, ರೈಲು, ರಸ್ತೆ, ತೈಲ ಮತ್ತು ಅನಿಲದಂತಹ ವಲಯಗಳಲ್ಲಿ ಸುಮಾರು 7,500 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡುವರು.
ಭಕ್ತರ ದರ್ಶನ ಹಾದಿಯ ವಿಶೇಷತೆ:ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿರುವ ಶಿರಡಿಯ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಭಕ್ತರ ದರ್ಶನ ಹಾದಿಗೆ 109 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು ಹವಾನಿಯಂತ್ರಿತವಾಗಿದ್ದು, ಮೂರು ಸ್ಥರದಲ್ಲಿ ನಿರ್ಮಿಸಲಾಗಿದೆ. ಹಗಲು ಮತ್ತು ರಾತ್ರಿಯ ವೇಳೆ ದೇಶ ವಿದೇಶಗಳ ಭಕ್ತರು ಪ್ರತ್ಯೇಕವಾಗಿ ಸುರಕ್ಷಿತವಾಗಿ ದರ್ಶನ ಪಡೆದುಕೊಳ್ಳಲು ಸಾಧ್ಯವಾಗಲಿದೆ. 2018ರಲ್ಲಿ ಈ ಯೋಜನೆಗೆ ಮೋದಿ ಅಡಿಗಲ್ಲು ಹಾಕಿದ್ದರು. ಯೋಜನೆಯು ನಾಲ್ಕು ವರ್ಷಗಳಲ್ಲಿ ಪೂರ್ಣಗೊಂಡಿದ್ದು, ಅವರೇ ಉದ್ಘಾಟಿಸಲಿದ್ದಾರೆ.
ನಿಲವಂದೆ ಯೋಜನೆ:ಅಹಮದ್‌ನಗರ ಜಿಲ್ಲೆಯ ಅಕೋಲೆ ತಾಲೂಕಿನ ನಿಲವಂದೆ ಅಣೆಕಟ್ಟು ಯೋಜನೆಯು ಬರ ಮತ್ತು ಕೃಷಿಯೋಗ್ಯ ಪ್ರದೇಶಗಳನ್ನು ಸುಧಾರಿಸುವುದಾಗಿದೆ. ಅಕೋಲೆ, ಸಂಗಮನೇರ್, ರಹತ, ಶ್ರೀರಾಂಪುರ, ಕೋಪರಗಾಂವ್ ಮತ್ತು ನಾಸಿಕ್ ತಾಲೂಕಿನ 182 ಗ್ರಾಮಗಳ 68,878 ಹೆಕ್ಟೇರ್ (1 ಲಕ್ಷದ 70 ಸಾವಿರದ 200 ಎಕರೆ) ಕೃಷಿ ಭೂಮಿಯ ಎಡ, ಬಲ ದಂಡೆಗೆ ನೀರಾವರಿ ಒದಗಿಸುವುದಾಗಿದೆ.
ಇದರೊಂದಿಗೆ ಪ್ರಧಾನಿ, ಅಹಮದ್‌ನಗರದ ಆಯುಷ್ ಆಸ್ಪತ್ರೆ ಉದ್ಘಾಟನೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಭೂಮಿಪೂಜೆ, ಶಿರಸಿ ವಿಮಾನ ನಿಲ್ದಾಣದ ಬಳಿಯ ನೂತನ ಟರ್ಮಿನಲ್ ಕಟ್ಟಡದ ಭೂಮಿಪೂಜೆ, ಕುರ್ದುವಾಡಿ-ಲಾತೂರ್ ರಸ್ತೆ ರೈಲ್ವೆ ವಿಭಾಗ (186 ಕಿಮೀ), ಜಲಗಾಂವ್‌ನಿಂದ ಭೂಸಾವಲ್‌ಗೆ ಸಂಪರ್ಕಿಸುವ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ (24.46 ಕಿಮೀ), ಎನ್‌ಎಚ್-166ರಲ್ಲಿ ಸಾಂಗ್ಲಿಯಿಂದ ನಾಲ್ಕು ಪಥದ ರಸ್ತೆ ವಿಸ್ತರಣೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಮನ್ಮಾಡ್ ಟರ್ಮಿನಲ್ ವಿದ್ಯುದ್ದೀಕರಣ, ಹೆಚ್ಚುವರಿ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡುವರು.
ಇದಾದ ಬಳಿಕ ಮೋದಿ, 37ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಲು ಗೋವಾಕ್ಕೆ ತೆರಳಲಿದ್ದಾರೆ.
ಇದನ್ನೂ ಓದಿ:'ಭೂಗಳ್ಳ' ಎಂದ ಬಿಜೆಪಿ ಅಭ್ಯರ್ಥಿ ಕುತ್ತಿಗೆಗೆ ಕೈ ಹಾಕಿದ ಬಿಆರ್ಎಸ್ ಶಾಸಕ: ನೇರ ಪ್ರಸಾರ ಕಾರ್ಯಕ್ರಮ ಅಲ್ಲೋಲ ಕಲ್ಲೋಲ