ಕರ್ನಾಟಕ

karnataka

ETV Bharat / bharat

ನೇತಾಜಿ ಸ್ಮರಣೆ: ಅಂಡಮಾನ್​ ನಿಕೋಬಾರ್​ನ 21 ದ್ವೀಪಗಳಿಗೆ 'ಪರಮವೀರರ' ಹೆಸರು ಅನಾವರಣ

ಅಂಡಮಾನ್ ಮತ್ತು​ ನಿಕೋಬಾರ್​ನ 21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದು ಅನಾವರಣಗೊಳಿಸಿದರು.

By

Published : Jan 23, 2023, 1:28 PM IST

andaman-nicobar-islands
ಅಂಡಮಾನ್ ಮತ್ತು​ ನಿಕೋಬಾರ್ ದ್ವೀಪಗಳಿಗೆ ಮರುನಾಮಕರಣ

ನವದೆಹಲಿ:ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್​ ನಿಕೋಬಾರ್​ನಲ್ಲಿನ 21 ದೊಡ್ಡ ದ್ವೀಪಗಳಿಗೆ ದೇಶದ ಅತ್ಯುನ್ನತ ಸೇನಾ ಪ್ರಶಸ್ತಿಯಾದ ಪರಮವೀರ ಚಕ್ರ ಸ್ವೀಕರಿಸಿದ ಮಹಾನ್​ ವೀರ ಯೋಧರ ಹೆಸರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಾಮಕರಣ ಮಾಡಿದರು. ಅಲ್ಲದೇ, ದ್ವೀಪವೊಂದಕ್ಕೆ ನೇತಾಜಿ ಸುಭಾಷ್​ಚಂದ್ರ ಬೋಸರ ಹೆಸರಿಟ್ಟರು. ಅಲ್ಲಿ ನಿರ್ಮಾಣವಾಗುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನೂ ಇದೇ ವೇಳೆ ಬಿಡುಗಡೆ ಮಾಡಿದರು.

ದ್ವೀಪಗಳಿಗೆ ಹೆಸರಿಡುವ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಮತ್ತು ಸುಬೇದಾರ್ ಮೇಜರ್ ಯೋಗೇಂದ್ರ ಸಿಂಗ್ ಯಾದವ್ (ನಿವೃತ್ತ) ಸೇರಿದಂತೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರನ್ನು ಈ ದ್ವೀಪಗಳಿಗೆ ಹೆಸರಿಸುವ ಮೂಲಕ ಅವರನ್ನು ಕೇಂದ್ರ ಸರ್ಕಾರ ಅಜರಾಮರವನ್ನಾಗಿ ಮಾಡಿದೆ.

ಉದ್ದೇಶವೇನು? ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐತಿಹಾಸಿಕ ಮಹತ್ವ ಸಾರಲು, ನೇತಾಜಿ ಅವರ ಸ್ಮರಣೆಯನ್ನು ಗೌರವಿಸಲು ರಾಸ್ ದ್ವೀಪಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಿದರೆ, ಉಳಿದವುಗಳಿಗೆ ಶಹೀದ್ ದ್ವೀಪ್ ಮತ್ತು ಸ್ವರಾಜ್ ದ್ವೀಪ್ ಎಂದು ಮರುನಾಮಕರಣ ಮಾಡಲಾಯಿತು.

ಮೊದಲು ತ್ರಿವರ್ಣ ಧ್ವಜ ಹಾರಿಸಿದ ನಾಡು:ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಅಂಡಮಾನ್‌ ನೆಲ ಮೊಟ್ಟಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ನಾಡಾಗಿದೆ. ಅಲ್ಲಿ ಮೊದಲ ಬಾರಿಗೆ ಸ್ವತಂತ್ರ ಭಾರತದ ಸರ್ಕಾರ ರಚನೆಯಾಯಿತು. ಭಾರತದ ದ್ವೀಪಗಳು ಜಗತ್ತಿಗೆ ಬಹಳಷ್ಟು ಕೊಡುಗೆ ನೀಡಬಲ್ಲವು. ಈ ಸಾಮರ್ಥ್ಯವನ್ನು ಗುರುತಿಸಲಾಗಿಲ್ಲ. ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇಂದು ಅದನ್ನು ತುಂಬಲಾಗಿದೆ" ಎಂದು ಹೇಳಿದರು.

ಅಂಡಮಾನ್​ ನಿಕೋಬಾರ್​ನ 21 ದ್ವೀಪಗಳಿಗೆ 'ಪರಮವೀರರ' ಹೆಸರು ಅನಾವರಣ

"ಎಲ್ಲಾ 21 ಪರಮವೀರರಿಗೆ ಭಾರತವೇ ಮೊದಲು ಎಂಬ ಏಕೈಕ ಸಂಕಲ್ಪವಿತ್ತು. ಇಂದು ಅವರ ಹೆಸರನ್ನು ಈ ದ್ವೀಪಗಳ ಮರುನಾಮಕರಣದ ಮೂಲಕ ಅವರ ನಿರ್ಣಯವು ಅಮರವಾಗಿರಲಿದೆ. ಇಂದು ನೇತಾಜಿ ಸುಭಾಷ್ ಬೋಸ್ ಅವರ ಜನ್ಮದಿನ. ದೇಶವು ಈ ದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸುತ್ತದೆ. ದಶಕಗಳಿಂದ ದೇಶದ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಲಾಗಿತ್ತು. ಆದರೆ ಈಗ, ಭಾರತ ಆಧುನಿಕ ಅಭಿವೃದ್ಧಿಯ ಎತ್ತರವನ್ನು ಮುಟ್ಟಿದೆ" ಎಂದು ಪ್ರಧಾನಿ ಹೇಳಿದರು.

"ಸ್ವಾತಂತ್ರ ಸೇನಾನಿ ವೀರ ಸಾವರ್ಕರ್ ಮತ್ತು ದೇಶಕ್ಕಾಗಿ ಹೋರಾಡಿದ ಅನೇಕ ವೀರರು ಅಂಡಮಾನ್‌ನ ಈ ನೆಲದಲ್ಲಿ ಬಂಧಿತರಾಗಿದ್ದರು. ನಾನು 4 -5 ವರ್ಷಗಳ ಹಿಂದೆ ಪೋರ್ಟ್ ಬ್ಲೇರ್‌ಗೆ ಭೇಟಿ ನೀಡಿದಾಗ ಅಲ್ಲಿನ 3 ಪ್ರಮುಖ ದ್ವೀಪಗಳಿಗೆ ಭಾರತೀಯರ ಹೆಸರುಗಳನ್ನು ಸೂಚಿಸಿದ್ದೆ" ಎಂದು ಪ್ರಧಾನಿ ಹೇಳಿದರು.

ದ್ವೀಪಗಳಿಗೆ ಹೆಸರಾದ ಯೋಧರಿವರು..:ಉತ್ತರ ಮತ್ತು ಮಧ್ಯ ಅಂಡಮಾನ್‌ನಲ್ಲಿರುವ ‘ಐಎನ್‌ಎಎನ್‌370’ ಸಂಖ್ಯೆಯ ಮೊದಲ ಜನವಸತಿಯಿಲ್ಲದ ದ್ವೀಪಕ್ಕೆ ಮೇಜರ್ ಸೋಮನಾಥ್ ಶರ್ಮಾ ಅವರ ಹೆಸರನ್ನು ಇಡಲಾಗಿತ್ತು. ಈಗ ಅದನ್ನು 'ಸೋಮನಾಥ್ ದ್ವೀಪ' ಎಂದು ಹೆಸರಿಸಲಾಗಿದೆ. ಸೋಮನಾಥ್​ ಶರ್ಮಾ ಅವರು ಪರಮವೀರ ಚಕ್ರದ ಮೊದಲ ಪುರಸ್ಕೃತರು. 1947ರ ನವೆಂಬರ್ 3 ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರನ್ನು ತಡೆಯುವ ಕಾರ್ಯಾಚರಣೆಯಲ್ಲಿ ಶರ್ಮಾ ಅವರು ಹುತಾತ್ಮರಾಗಿದ್ದರು. ಬದ್ಗಾಮ್ ಕದನದ ಸಮಯದಲ್ಲಿ ಅವರ ಶೌರ್ಯ ಮತ್ತು ತ್ಯಾಗಕ್ಕಾಗಿ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯನ್ನು ನೀಡಲಾಗಿದೆ.

ಐಎನ್‌ಎಎನ್‌308 ಸಂಖ್ಯೆಯ ಮತ್ತೊಂದು ಜನವಸತಿಯಿಲ್ಲದ ದ್ವೀಪವನ್ನು 'ಕರಮ್ ಸಿಂಗ್ ದ್ವೀಪ' ಎಂದು ಹೆಸರಿಸಲಾಗಿದೆ. ಅದೇ ರೀತಿ, ಮೇಜರ್ ರಾಮ ರಘೋಬ ರಾಣೆ, ನಾಯಕ್ ಜಾದುನಾಥ್ ಸಿಂಗ್, ಕಂಪನಿಯ ಹವಾಲ್ದಾರ್ ಮೇಜರ್ ಪೀರು ಸಿಂಗ್ ಶೆಖಾವತ್, ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲಾರಿಯಾ, ಲೆಫ್ಟಿನೆಂಟ್ ಕರ್ನಲ್ ಧನ್ ಸಿಂಗ್ ಥಾಪಾ ಮಗರ್, ಸುಬೇದಾರ್ ಜೋಗಿಂದರ್ ಸಿಂಗ್ ಸಹನಾನ್, ಮೇಜರ್ ಶೈತಾನ್ ಸಿಂಗ್ ಭಾಟಿ, ಕಂಪನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್ ತಾರಾಪೋರ್, ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ, ಕರ್ನಲ್ ಹೋಶಿಯಾರ್ ಸಿಂಗ್ ದಹಿಯಾ, ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್, ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖೋನ್, ಮೇಜರ್ ರಾಮಸ್ವಾಮಿ ಪರಮೇಶ್ವರನ್, ಕ್ಯಾಪ್ಟನ್ ಬನಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಮತ್ತು ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಅವರ ಹೆಸರನ್ನು ದ್ವೀಪಗಳಿಗೆ ಇಡಲಾಗಿದೆ.

ಇದನ್ನೂ ಓದಿ:ಹಿಜಾಬ್​ ಪ್ರಕರಣದ​ ವಿಚಾರಣೆಗೆ ಸುಪ್ರೀಂ ಕೋರ್ಟ್​ ಒಪ್ಪಿಗೆ: ಶೀಘ್ರವೇ ದಿನಾಂಕ ನಿಗದಿ

ABOUT THE AUTHOR

...view details