ನವದೆಹಲಿ :ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲ್ಲು ದಾಟಿದೆ. ದೇಶವು ಕೇವಲ ಎರಡು ದಿನಗಳೊಳಗೆ 100 ಕೋಟಿಗೂ ಅಧಿಕ ಲಸಿಕಾ ಡೋಸ್‌ಗಳನ್ನು ನೀಡಿದೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಲಸಿಕಾ ಉತ್ಪಾದಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ದೇಶದಲ್ಲಿರುವ 7 ಲಸಿಕಾ ಉತ್ಪಾದಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್, ಡಾ. ರೆಡ್ಡೀಸ್ ಲ್ಯಾಬೊರೇಟರಿ, ಝೈಡಸ್ ಕ್ಯಾಡಿಲಾ, ಜೆನೋವಾ ಬಯೋಫಾರ್ಮ್, ಬಯೋಲಾಜಿಕಲ್ ಇ ಹಾಗೂ ಪ್ಯಾನೇಸಿಯಾ ಬಯೋಟೆಕ್ ಕಂಪನಿಗಳ ಮುಖ್ಯಸ್ಥರ ಜೊತೆ ಮೋದಿ ಸಂವಾದ ನಡೆಸಿದ್ದಾರೆ.
ಸಭೆಯ ಆರಂಭದಲ್ಲಿ ಭಾರತದ 100 ಕೋಟಿ ಲಸಿಕೆ ಸಾಧನೆಗೆ ಕಾರಣರಾದ ಲಸಿಕಾ ಉತ್ಪಾದಕ ಕಂಪನಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಕೋವಿಡ್ ಲಸಿಕೆ ಸಂಶೋಧನೆ ಹಾಗೂ ಅಭಿವೃದ್ಧಿ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲರ ಸಹಕಾರದಿಂದ ಭಾರತ 100 ಕೋಟಿ ಲಸಿಕೆ ಸಾಧನೆ ಮಾಡಿದೆ. ಇದೀಗ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕಿದೆ. ಈ ಮೂಲಕ ಸಂಪೂರ್ಣ ಭಾರತವನ್ನು ಕೋವಿಡ್‌ನಿಂದ ಮುಕ್ತ ಮಾಡಬೇಕಿದೆ ಎಂದು ಹೇಳಿದ್ದಾರೆ. ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಉಪಸ್ಥಿತರಿದ್ದರು.
ಸಭೆ ಬಳಿಕ ಮಾತನಾಡಿದ ಭಾರತ್ ಬಯೋಟೆಕ್ ಮುಖ್ಯಸ್ಥ ಕೃಷ್ಣ ಎಲ್ಲಾ, ಕೇವಲ ಎರಡು ದಿನಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿದ್ದಕ್ಕೆ ದೇಶವನ್ನು ಅಭಿನಂದಿಸಿದರು. ಭಾರತ ಇತರ ಎಲ್ಲಾ ದೇಶಗಳಿಗಿಂತ ಉತ್ತಮ ಹಾಗೂ ವೇಗವಾಗಿ ಲಸಿಕೆ ಉತ್ಪಾದನೆ ಮಾಡುತ್ತಿದೆ. ಹಲವು ರಾಷ್ಟ್ರಗಳು ಲಸಿಕೆಗಾಗಿ ಭಾರತವನ್ನೇ ಅವಲಂಬಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರಗಳನ್ನು ಎಲ್ಲಾ ಅವರು ಸ್ವಾಗತಿಸಿದರು.
ಪ್ರಧಾನಿ ಮೋದಿಯವರನ್ನು ಕೊಂಡಾಡಿದ ಭಾರತ್ ಬಯೋಟೆಕ್ ಮುಖ್ಯಸ್ಥ ಕೃಷ್ಣ ಎಲ್ಲಾ ಇದನ್ನೂ ಓದಿ: ರಾಜ್ಯದಲ್ಲಿಂದು 371 ಮಂದಿಗೆ ಕೊರೊನಾ: 7 ಸೋಂಕಿತರ ಸಾವು
ಆರೋಗ್ಯ ಸಚಿವಾಲಯದ ಪ್ರಕಾರ, ದೇಶದ ಸುಮಾರು 93 ಕೋಟಿ ವಯಸ್ಕರಲ್ಲಿ ಶೇ.31ರಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್, ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ- ವ್ಯಾಕ್ಸಿನ್ಗಳನ್ನು ದೇಶದ ಕೋವಿಡ್ ಅಭಿಯಾನದಲ್ಲಿ ಬಳಸಲಾಗುತ್ತಿದೆ.