ಚಂದೌಲಿ(ಉತ್ತರ ಪ್ರದೇಶ):ಯುದ್ಧಪೀಡಿತ ಖಾರ್ಕಿವ್ ಪ್ರದೇಶದಲ್ಲಿ ಶೆಲ್ ದಾಳಿಯಿಂದಾಗಿ ಕರ್ನಾಟಕದ ಹಾವೇರಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಆದಷ್ಟು ಶೀಘ್ರವಾಗಿ ಮೃತದೇಹವನ್ನು ತರಲಾಗುತ್ತದೆ ಎಂದಿದ್ದಾರೆ.
ಉತ್ತರ ಪ್ರದೇಶದ ಚಂದೌಲಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಭಾರತೀಯ ವಿದ್ಯಾರ್ಥಿಯ ಮೃತದೇಹವನ್ನು ತರಲು ಶ್ರಮಿಸುತ್ತಿದ್ದಾರೆ. ಇದರ ಜೊತೆಗೆ ವಿದೇಶಾಂಗ ಇಲಾಖೆಯೂ ಕೂಡಾ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಉಕ್ರೇನ್ನಲ್ಲಿ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಅಲ್ಲಿ ಏರ್ ಸ್ಟ್ರಿಪ್ ಇಲ್ಲ. ವಿಮಾನ ಕೂಡಾ ಉಕ್ರೇನ್ನಲ್ಲಿ ಇಳಿಯುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ದಿನಕ್ಕೆ ಎರಡು ಬಾರಿ ಉಕ್ರೇನ್ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆಯುತ್ತಿದೆ. ಇದಕ್ಕಾಗಿ ಭಾರತೀಯ ವಾಯುಪಡೆಯ ವಿಮಾನಗಳನ್ನು ನಿಯೋಜನೆ ಮಾಡಲಾಗಿದೆ. ಉಕ್ರೇನ್ನಲ್ಲಿರುವ ಜನರನ್ನು ನೆರೆಯ ರಾಷ್ಟ್ರಗಳಿಗೆ ಭಾರತೀಯರನ್ನು ಕಳುಹಿಸಿ, ಅಲ್ಲಿಂದ ಏರ್ಲಿಫ್ಟ್ ಮಾಡಲಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಉಕ್ರೇನ್ನ ಮೇಲೆ ಹೆಚ್ಚಾದ ದಾಳಿಯ ತೀವ್ರತೆ: ರಷ್ಯಾದಿಂದ ವಿಡಿಯೋ ಬಿಡುಗಡೆ
ರಷ್ಯಾ ನಡೆಸುತ್ತಿರುವ ನಿರಂತರ ದಾಳಿ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯವರೆಗೆ 2 ಸಾವಿರಕ್ಕೂ ಅಧಿಕ ನಾಗರಿಕರು ಉಕ್ರೇನ್ನಲ್ಲಿ ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್ ತುರ್ತು ಸೇವಾ ವಿಭಾಗ ತಿಳಿಸಿದೆ. ಇದೇ ವೇಳೆ ರಷ್ಯಾದ 6 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ.