ವರಂಗಲ್(ತೆಲಂಗಾಣ):ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತೆಲಂಗಾಣದಲ್ಲಿ 6,100 ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಶನಿವಾರ ಬೆಳಗ್ಗೆ ಹೈದರಾಬಾದ್‌ಗೆ ಬಂದಿಳಿದ ಪ್ರಧಾನಿ ಮೋದಿ, ಮೊದಲು ವರಂಗಲ್ನಲ್ಲಿ ಭದ್ರಕಾಳಿ ದೇವಿ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿ ಗೋವುಗಳಿಗೆ ಆಹಾರ ನೀಡಿ, ಬಳಿಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಇದರಲ್ಲಿ 5,550 ಕೋಟಿ ರೂಪಾಯಿ ಮೌಲ್ಯದ 176 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತು 500 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ವ್ಯಾಗನ್ ಉತ್ಪಾದನಾ ಘಟಕ ಸೇರಿವೆ. ದೊಡ್ಡ ಪ್ರಮಾಣದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ರಾಜ್ಯಕ್ಕೆ ಬಂದ ಪ್ರಧಾನಿಯನ್ನು ಆಹ್ವಾನಿಸಲು ಮುಖ್ಯಮಂತ್ರಿ ಕೆಸಿಆರ್ ಈ ಬಾರಿಯೂ ಆಗಮಿಸಿರಲಿಲ್ಲ.
ದೇಶದಲ್ಲಿ ಜಗತ್ತಿನ ಹೂಡಿಕೆ:ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರುಪ ಪ್ರಧಾನಿ ಮೋದಿ ಅವರು, ಇಡೀ ಜಗತ್ತೇ ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದೆ. ಭಾರತ ಹಲವು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಸಾಧಿಸುತ್ತಿದೆ ಎಂದು ಹೇಳಿದರು.
ಉತ್ಪಾದನಾ ಕ್ಷೇತ್ರವು ದೇಶದ ಯುವಕರಿಗೆ ಉದ್ಯೋಗ ನೀಡುವ ದೊಡ್ಡ ವೇದಿಕೆಯಾಗಿದೆ. ಉತ್ಪಾದನೆಯನ್ನು ಉತ್ತೇಜಿಸಲು ನಾವು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (ಪಿಎಲ್‌ಐ) ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ 50 ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ದಾಖಲೆ ಪ್ರಮಾಣದಲ್ಲಿ ಭಾರತ ರಕ್ಷಣಾ ರಫ್ತು ಮಾಡುತ್ತಿದೆ. 9 ವರ್ಷಗಳ ಹಿಂದೆ ಭಾರತದ ರಕ್ಷಣಾ ರಫ್ತು 1000 ಕೋಟಿ ರೂ.ಗಿಂತ ಕಡಿಮೆಯಿತ್ತು. ಈಗ ಅದು 16,000 ಕೋಟಿ ರೂ. ದಾಟಿದೆ ಎಂದು ಪ್ರಧಾನಿ ಹೇಳಿದರು.