ನವದೆಹಲಿ:ಡಿಜಿಟಲ್ ಪಾವತಿ ವಿಧಾನ ಇ - ರುಪಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದು, ನಗದು ರಹಿತ ಈ ಯೋಜನೆ ಭವಿಷ್ಯದ ಸುಧಾರಣೆಗಳಲ್ಲಿ ಒಂದಾಗಲಿದೆ ಎಂದು ಅವರು ತಿಳಿಸಿದ್ದಾರೆ.
21ನೇ ಶತಮಾನದಲ್ಲಿ ಭಾರತ ಯಾವ ರೀತಿಯಲ್ಲಿ ಅಭಿವೃದ್ಧಿಯತ್ತ ಸಾಗಿದೆ ಎಂಬುದಕ್ಕೆ e-RUPI ಒಂದು ಉದಾಹರಣೆಯಾಗಿದ್ದು, ತಂತ್ರಜ್ಞಾನದ ಸಹಾಯದಿಂದ ಇದೀಗ ಭಾರತ ಡಿಜಿಟಲ್ ಪಾವತಿ ಪರಿಹಾರಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು. 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂಭ್ರಮದಲ್ಲಿರುವ ನಾವು ಇದೀಗ ಇ-ರುಪಿ ಯೋಜನೆಗೆ ಚಾಲನೆ ನೀಡುತ್ತಿರುವುದು ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇ-ರುಪಿ ವೋಚರ್ ದೇಶದಲ್ಲಿನ ಡಿಜಿಟಲ್ ವಹಿವಾಟು ಮತ್ತು DBT ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದು, ಪಾರದರ್ಶಕ ಹಾಗೂ ತೊಂದರೆ ರಹಿತ ಹಣಕಾಸಿನ ವರ್ಗಾವಣೆಗೆ ಎಲ್ಲರಿಗೂ ಸಹಕಾರಿಯಾಗಲಿದೆ ಎಂದು ನಮೋ ತಿಳಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ಇದರಲ್ಲಿ ಸೇರಿಸಲಾಗುವುದು ಎಂದರು.ಬರುವ ದಿನಗಳಲ್ಲಿ ಆಹಾರ ವಿತರಣೆ, ಆರೋಗ್ಯ ಸೇವೆಗಳು ಸೇರಿದಂತೆ ಬೇರೆ ವಲಯಗಳಿಗೆ ಈ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದಿರುವ ನಮೋ, ಇದರಿಂದ ದೇಶ ಮತ್ತಷ್ಟು ಡಿಜಟಲೀಕರಣದತ್ತ ದಾಪುಗಾಲು ಹಾಕಿದೆ ಎಂದರು.
ಇದನ್ನೂ ಓದಿರಿ: ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ