ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ 2022ಗೆ ಇಂದು ತೆರೆ ಬೀಳಲಿದೆ. 10 ದಿನದಲ್ಲಿ ಭಾರತ 18 ಚಿನ್ನ ಸೇರಿ 55 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹಲವಾರು ಪದಕಗಳನ್ನು ಗೆದ್ದ ನಂತರ ಭಾರತದ ಆಟಗಾರರ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಅಷ್ಟೇ ಅಲ್ಲ ಬೆಳ್ಳಿ ಗೆದ್ದ ಮಹಿಳಾ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಮಹಿಳೆಯರು ಮೊಟ್ಟಮೊದಲ ಬಾರಿಗೆ ಬೆಳ್ಳಿ ಗೆದ್ದಿರುವುದು ಸಂತಸ ತಂದಿದೆ. ಕ್ರಿಕೆಟ್‌ನಲ್ಲಿ ಮೊದಲ ಪದಕ ಯಾವಾಗಲೂ ವಿಶೇಷವಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ. ಮಿಶ್ರ ಡಬಲ್ಸ್ ಟೇಬಲ್ ಟೆನಿಸ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ ಅವರನ್ನು ಶ್ಲಾಘಿಸಿದ ಮೋದಿ, ಅವರು ಅತ್ಯುತ್ತಮ ಟೀಮ್ ವರ್ಕ್ ತೋರಿಸಿದ್ದಾರೆ ಎಂದರು.
ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಕಿಡಂಬಿ ಶ್ರೀಕಾಂತ್ರನ್ನು ಅಭಿನಂದಿಸಿದ ಪ್ರಧಾನಿ, ಭಾರತೀಯ ಬ್ಯಾಡ್ಮಿಂಟನ್‌ನ ದಿಗ್ಗಜರಲ್ಲಿ ಒಬ್ಬರು. ಇದು ಅವರ ನಾಲ್ಕನೇ CWG ಪದಕವಾಗಿದ್ದು, ಅವರ ಕೌಶಲ್ಯ ಮತ್ತು ಸ್ಥಿರತೆಯನ್ನು ತೋರಿಸುತ್ತದೆ. ಅವರು ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿ ಮತ್ತು ಭಾರತವನ್ನು ಇನ್ನಷ್ಟು ಹೆಮ್ಮೆಪಡುವಂತೆ ಮಾಡಲಿ ಎಂದು ಪ್ರಧಾನಮಂತ್ರಿ ಹೇಳಿದರು.