ನವದೆಹಲಿ:ಸುಪ್ರೀಂ ಕೋರ್ಟ್ ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡುವ ಬಗೆಗಿನ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ.ವೈ.ಚಂದ್ರಚೂಡ್ ಅವರ ಅಭಿಪ್ರಾಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಸಿಜೆಐ, ಪ್ರತಿ ಭಾರತೀಯನಿಗೆ ತಮ್ಮದೇ ಆದ ಭಾಷೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳು ದೊರೆಯಬೇಕು ಎಂದಿದ್ದರು. ಈ ಕುರಿತ ವಿಡಿಯೋವನ್ನು ಪ್ರಧಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳು ಲಭ್ಯವಾಗುವಂತೆ ಕೆಲಸ ಮಾಡುವ ಅಗತ್ಯತೆಯ ಬಗ್ಗೆ ನ್ಯಾ.ಚಂದ್ರಚೂಡ್ ಹೇಳಿದ್ದರು. ತೀರ್ಪುಗಳನ್ನು ಭಾಷಾಂತರಗೊಳಿಸುವ ಅಗತ್ಯತೆ ಇದ್ದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆಯೂ ಅವರು ಸೂಚಿಸಿದ್ದರು. "ಇದು ಶ್ಲಾಘನೀಯ ಚಿಂತನೆ. ಅನೇಕರಿಗೆ, ವಿಶೇಷವಾಗಿ ಯುವಕರಿಗೆ ಸಹಾಯವಾಗುತ್ತದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದರು.
ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಂತಹ ತಾಂತ್ರಿಕ ಶಿಕ್ಷಣವನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಭಾರತವು ಹಲವಾರು ಭಾಷೆಗಳನ್ನು ಹೊಂದಿದೆ. ಇದು ನಮ್ಮ ಸಾಂಸ್ಕೃತಿಕ ಕಂಪು ಎಲ್ಲೆಡೆ ಪಸರಿಸುತ್ತದೆ. ಮಾತೃ ಭಾಷೆಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯದಂತಹ ವಿಷಯಗಳನ್ನು ಅಧ್ಯಯನ ಮಾಡುವ ಆಯ್ಕೆಯನ್ನು ನೀಡುವುದೂ ಸೇರಿದಂತೆ ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ತಿಳಿಸಿದ್ದರು.