ನವದೆಹಲಿ:ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಾದ 2022ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಮತ್ತು ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.
'ಪೋಸ್ಟ್ ಬಜೆಟ್ ಸೆಮಿನಾರ್: ಫೋಸ್ಟರಿಂಗ್ ಸ್ಟ್ರಾಂಗ್ ಇಂಡಸ್ಟ್ರಿ-ಸ್ಕಿಲ್ ಲಿಂಕ್ ' ಎಂಬ ವಿಷಯದ ಕುರಿತ ವರ್ಚುವಲ್ ವೆಬ್‌ನಾರ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, "ನಮ್ಮ ಯುವ ಪೀಳಿಗೆಯೇ ದೇಶದ ಭವಿಷ್ಯದ ನಾಯಕರು. ಆದ್ದರಿಂದ ಇಂದಿನ ಯುವ ಪೀಳಿಗೆಯನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸುವುದು ಎಂದರ್ಥ ಎಂದ ಅವರು 2022ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಐದು ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಪಟ್ಟಿ ಮಾಡಿದರು.
ಮೊದಲನೆಯದು 'ಗುಣಮಟ್ಟದ ಶಿಕ್ಷಣದ ಸಾರ್ವತ್ರೀಕರಣ' - ನಮ್ಮ ಶಿಕ್ಷಣ ವ್ಯವಸ್ಥೆಯನ್ನು ವಿಸ್ತರಿಸಲು, ಅದರ ಗುಣಮಟ್ಟವನ್ನು ಸುಧಾರಿಸಲು ಮತ್ತು ಶಿಕ್ಷಣ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಮೋದಿ ತಿಳಿಸಿದರು.
ಎರಡನೆಯದು 'ಕೌಶಲ್ಯಾಭಿವೃದ್ಧಿ' - ದೇಶದಲ್ಲಿ ಡಿಜಿಟಲ್ ಕೌಶಲ್ಯಾಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ರಚಿಸಬೇಕು. ಉದ್ಯಮದ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿ ಮಾಡಬೇಕು, ಉದ್ಯಮದ ಸಂಪರ್ಕವು ಉತ್ತಮವಾಗಿರಬೇಕು. ಅದರ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಗಮನ ಹರಿಸಲಾಗಿದೆ" ಎಂದು ಪ್ರಧಾನಿ ಹೇಳಿದರು.